ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶಾಸಕ ಯತ್ನಾಳ ಹೊಣೆ: ಶಾಸಕ ಯತ್ನಾಳ ವಿರುದ್ಧ ಮಾಜಿ ಸಚಿವ ನಿರಾಣಿ ವಾಗ್ದಾಳಿ

ವಿಜಯಪುರ : ವಿಜಯಪುರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ವಿಜಯಪುರ ನಗರ ಶಾಸಕರೇ ನೇರ ಹೊಣೆ ಜಿಲ್ಲೆಯಲ್ಲಿಯೇ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಿಮಗೆ ಹೆಲಿಕ್ಯಾಪ್ಟರ್ ಕೊಡಿಸಿದ್ದು ಯಾವ ಉಪಯೋಗ? ಎಂದು ಗುಡುಗುವ ಮೂಲಕ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತೊಮ್ಮೆ ವಿಜಯಪುರ ನಗರ ಶಾಸಕ ಯತ್ನಾಳರ ವಿರುದ್ಧ ಗುಡುಗಿದ್ದಾರೆ.

ಸಂಸದ ರಮೇಶ ಜಿಗಜಿಣಗಿ ಮೊದಲಾದ ಮುಖಂಡರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಯತ್ನಾಳರ ಹೆಸರು ಉಲ್ಲೇಖಿಸದೇ ಟೀಕಾಸ್ತ್ರ ಪ್ರಯೋಗಿಸಿದರು. ಮೊನ್ನೆ ಬಿಜೆಪಿ ಸಮಾವೇಶದ ಗಲಾಟೆ ವಿಷಯವನ್ನೂ ಪ್ರಸ್ತಾಪಿಸಿ ಖಾರವಾಗಿ ತರಾಟೆಗೆ ತೆಗೆದುಕೊಂಡರು.

ಎಲ್ಲ ನಾಯಕರ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡಿ ಟಿಕಿಸುವುದು ಅವರ ಛಾಳಿ, ಬಿ.ಎಸ್. ಯಡಿಯೂರಪ್ಪ, ದಿ.ಅನಂತಕುಮಾರ, ಈಶ್ವರಪ್ಪ ಮೊದಲಾದ ಹಿರಿಯ ನಾಯಕರನ್ನು ನಮ್ಮ ಪಕ್ಷದಲ್ಲಿಯೇ ಇದ್ದು ಬಾಯಿಗೆ ಬಂದಂತೆ ಮಾತನಾಡಿದ್ದಾಗಿದೆ, ಒಂದು ಸಲ ಜಗದೀಶ ಶೆಟ್ಟರ್, ಇನ್ನೊಂದು ಸಲ ಪ್ರಹಾದ ಜೋಶಿ, ಮತ್ತೊಮ್ಮೆ ವಿ. ಸೋಮಣ್ಣ ಅಷ್ಟೇ ಅಲ್ಲದೇ ಅನೇಕ ಸಮುದಾಯಗಳ ಬಗ್ಗೆಯೂ ಕೇವಲವಾಗಿ ಮಾತನಾಡಿದ ಇತಿಹಾಸವಿದೆ, ಒಂದು ರೀತಿ ನಗರ ಶಾಸಕರಿಗೆ `ಮಂದ್ಯಾಗ ಒದೆಯೋದು… ಸಂದ್ಯಾಗ ಕಾಲ ಹಿಡಿದುಕೊಳ್ಳುವ’ ಉಕ್ತಿ ಸೂಕ್ತವಾಗುತ್ತದೆ, ಇದು ಇವರ ಚಾಳಿಯಾಗಿದೆ, ಸಂದರ್ಭ ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುವೆ, ಈಗ ಮತ್ತೆ ತಮ್ಮ ನಾಟಕ ಕಂಪನಿ ಶುರು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಾಗಲು ಸಾವಿರಾರು ಕೋಟಿ ಕೊಡಬೇಕು, ಮಂತ್ರಿ ಮಾಡಲು 100 ಕೋಟಿ, ನಿಗಮ ಅಧ್ಯಕ್ಷರನ್ನಾಗಿ ಮಾಡಲು ಕೋಟಿ ಕೋಟಿ ಹಣ ಸುರಿಯಬೇಕು ಎಂಧು ಹೇಳಿರುವುದು ಬಿಜೆಪಿಗೆ ದೊಡ್ಡ ಹೊಡೆತವಾಗಿರುವುದು ಈ ಪುಣ್ಯಾತ್ಮನಿಂದಲೇ ಎಂದು ವ್ಯಂಗ್ಯವಾಡಿದರು.

ಪರಾಜಿತ ಅಭ್ಯರ್ಥಿಗಳು ವಿಜಯಪುರ ಸಮಾವೇಶದಲ್ಲಿ ಭಾಗವಹಿಸಿದ್ದರು, ವಿಜಯಪುರ ನಗರದ ಏಕೈಕ ಬಿಜೆಪಿ ಶಾಸಕ ಮುಖ್ಯಮಂತ್ರಿಗಳನ್ನು ಸ್ವಾಗತಿಸಬೇಕಿತ್ತು, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು, ಇರಲಿ ಎಂದು ಅವರಿಗಾಗಿ ಎರಡು ತಾಸು ಕಾದರೂ ಸಮಾವೇಶಕ್ಕೆ ಬರಲಿಲ್ಲ, ಎರಡು ತಾಸು ನಂತರ ಸಭೆ ನಡೆಸಿದರೂ ಅದಕ್ಕೆ ತಗಾದೆ ತೆಗೆದ ಕಾರಣಕ್ಕೆ ನಾವೆಲ್ಲರೂ ಹೊರಬಂದೆವು ಎಂದು ಗಲಾಟೆ ಪ್ರಹಸನಕ್ಕೆ ತರಾಟೆಗೆ ತೆಗೆದುಕೊಂಡರು.

ಮಹಾನಗರ ಪಾಲಿಕೆಯಲ್ಲಿ ಮೇಯರ್-ಉಪಮೇಯರ್ ಸಹ ಮಾಡಲಿಲ್ಲ, ಅಲ್ಲಿ ಮೇಯರ್ ಮಾಡಿದರೆ ಅಧಿಕಾರ ವಿಕೇಂದ್ರಿಕರಣವಾಗುತ್ತದೆ ಎಂಬ ಕಾರಣಕ್ಕೆ ಎಲ್ಲ ಅಧಿಕಾರ ತಾವೊಬ್ಬರೇ ಅನುಭವಿಸಬೇಕು ಎಂಬ ಉದ್ದೇಶದಿಂದ ನಗರ ಶಾಸಕರು ಚುನಾವಣೆ ಸಹ ನಡೆಸಲು ಹೋಗಲಿಲ್ಲ ಎಂದರು.

ನಿಯತ್ತು ಹಾಗೂ ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನಗರ ಶಾಸಕರು, ಅಧಿಕಾರಿಗಳಿಗೆ ನೇರವಾಗಿ ಗೋಶಾಲೆಗೆ ಹಣ ಕೊಡಿ ಎಂದು ಹೇಳುತ್ತಾರೆ, ಬಬಲೇಶ್ವರ ಚುನಾವಣೆ ಪ್ರಚಾರಕ್ಕೆ ತಡಮಾಡಿ ಹೋದರು, ನಮ್ಮ ಪಕ್ಷದ ಸಾಧನೆಗಳನ್ನು ಹೇಳುವ ಬದಲು ತಮ್ಮ ವೈಯುಕ್ತಿಕ ಪ್ರತಿಷ್ಠೆ ಮಾತು ಹೇಳಿ ಎದ್ದು ಬಂದಿರುವುದು ಅವರ ಒಳ ಮನಸ್ಸಿನಲ್ಲಿ ಏನಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಪಂಚಮಸಾಲಿ ಮೀಸಲಾತಿಗಾಗಿ ನಾನು, ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಅನೇಕರು ಪ್ರಯತ್ನ ಮಾಡಿದೆವು, ಅಂದು ಸಹ ಆಡಳಿತ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಜೊತೆ ಕೈ ಜೋಡಿಸಿಕೊಂಡು ನಮ್ಮ ಮೇಲೆಯೇ ವಿನಾಕಾರಣ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾದರು. ಬಿಜೆಪಿಯಲ್ಲಿದ್ದರೂ ಬಿಜೆಪಿಗರ ವಿರುದ್ಧ ಹೋರಾಟ ಮಾಡಿದ್ದ ವಿಜಯಪುರ ನಗರ ಶಾಸಕರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಕೆ ಹೋರಾಟ ಸಂಘಟಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಯಾವ ಉದ್ಯಮ ಮಾಡಿದರೂ ಅದನ್ನು ಟೋಪಿ ಹಾಕುವ ಕೆಲಸ ಮಾಡಿದ್ದಾರೆ, ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರಿಗೆ ಟೋಪಿ ಹಾಕಿದರು, ಹೈಪರ್ ಮಾರ್ಟ್ ಮಾಡಲು ಕೋಟಿ ಕೋಟಿ ಹಣ ಗಿಟ್ಟಿಸಿಕೊಂಡು ಕೋಟಿ ಕಾರ್‌ನಲ್ಲಿ ಅಡ್ಡಾಡುತ್ತಾರೆ, ರೊಕ್ಕ ಸಂಗ್ರಹಿಸಿ ಉದ್ಯಮವನ್ನು ಕೀಲಿ ಹಾಕುವುದು, ಕಾರ್‌ನಲ್ಲಿ ಅಡ್ಡಾಡುವುದು ಇವರ ಕೆಲಸ ಎಂದು ವ್ಯಂಗ್ಯವಾಡಿದರು.

ಉದ್ಯಮಿ ವಿಜಯ ಸಂಕೇಶ್ವರ ಅವರು ಉದ್ಯಮ ರಂಗದ ಕಾರ್ಯ ಬಾಹುಳ್ಯದಿಂದಾಗಿ ಅವರಿಗೆ ಸಚಿವ ಸ್ಥಾನ ನಿಭಾಯಿಸುವ ಕಾರಣದಿಂದ ಅವರು ಕೇಂದ್ರ ಸಚಿವ ಸ್ಥಾನ ತ್ಯಾಗ ಮಾಡಿದರು, ಸಂಕೇಶ್ವರ ತ್ಯಾಗದಿಂದಾಗಿ ಯತ್ನಾಳ ಅವರಿಗೆ ಕೇಂದ್ರ ಸಚಿವ ಸ್ಥಾನ ದೊರಕಿತ್ತು, ಅದು ಸಹ ಪೂರ್ಣಾವಧಿ ದೊರಕಿಲಿಲ್ಲ, ಕೇಂದ್ರದಲ್ಲಿ ನಿಮಗೆ ಏಕೆ ಪೂರ್ಣಾವಧಿ ಸಚಿವರನ್ನಾಗಿ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ಪರಮಾಣು ಒಪ್ಪಂದ ಸಂದರ್ಭದಲ್ಲಿ ಸಂಸದರಾಗಿದ್ದ ಈಗಿನ ವಿಜಯಪುರ ನಗರ ಶಾಸಕರು ಒಂದು ಹಂತಕ್ಕೆ ಕಾಂಗ್ರೆಸ್ ಬಾಗಿಲಿಗೂ ತಲುಪಿದ್ದರು, ಕಾಂಗ್ರೆಸ್ ಸೇರ್ಪಡೆ ಸಹ ಆಗುವವರಿದ್ದರು, ಆದರೆ ದಿ. ಅನಂತಕುಮಾರ ಅವರು ಮನವೊಲಿಸಿದ ಪರಿಣಾಮ ಪಕ್ಷಕ್ಕೆ ಉಳಿದುಕೊಂಡರು, ನಂತರ ಜೆಡಿಎಸ್ ಪಕ್ಷಕ್ಕೆ ಸೇರಿ ಬಿಜೆಪಿ ನಾಯಕರಿಗೆ ಅಷ್ಟೇ ಅಲ್ಲ ಯಾರು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದರೋ ಅವರನ್ನೇ ಅಸಂಸದೀಯ ಪದ ಪ್ರಯೋಗಿಸಿ ಟೀಕಿಸಿದ್ದರು.

ವಿಜಯಪುರ ನಗರ ಶಾಸಕರು ಸುಧಾರಣೆಯಾಗುತ್ತಾರೆ ಎಂಬ ನಂಬಿಕೆ ಇತ್ತು, ಈ ಕಾರಣಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಮುಂದೆ ಅವರ ವರ್ತನೆ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದೇವೆ ಎಂಬುದು ನಿಜ. ಈಗ ನಾಯಿ ಬಾಲ ಮತ್ತೆ ಡೊಂಕು ಎಂಬಂತಾಗಿದೆ, ಹೀಗಾಗಿ ಅವರ ವರ್ತನೆಯನ್ನು ರಾಜ್ಯ ಹಾಗೂ ರಾಷ್ಟ್ರ ನಾಯಕರ ಗಮನಕ್ಕೆ ತರಲು ಸಿದ್ಧ ಎಂದು ನಿರಾಣಿ ಹೇಳಿದರು.

ವಿಜಯಪುರ ನಗರ ಶಾಸಕರು ಜೋಡಣೆ ಮಾಡುವ ಕೆಲಸ ಮಾಡುತ್ತಾರೆ, ಅವರು ಸಹ ಕಾದು ನೋಡಿದ್ದಾರೆ, ಇದೇ ರೀತಿ ಅವರ ವರ್ತನೆ ಮುಂದುವರೆದರೆ ಪಾಪದ ಕೊಡ ತುಂಬುತ್ತದೆ. ಬೇರೆ ಪಕ್ಷದವರೊಂದಿಗೆ ಒಳಒಪ್ಪಂದ ಮಾಡಿಕೊಳ್ಳುವ ಜೊತೆಗೆ ಅವರ ಜೊತೆ ಪಾರ್ಟಿ ಸಹ ವಿಜಯಪುರ ನಗರ ಶಾಸಕರು ಮಾಡಿದ್ದಾರೆ, ಈ ಎಲ್ಲ ಪಾಪದ ಕೊಡ ತುಂಬಿ ಬಂದಿದೆ. ವಿಜಯಪುರ ನಗರ ಶಾಸಕರ ವರ್ತನೆ ಜನರಿಗೆ ಗೊತ್ತಾಗಿದೆ ಎಂದರು.

ಹಿಂದೂ ಹುಲಿ ಎಂದು ಹೇಳಿಕೊಳ್ಳುವ ನಾಯಕರು ಈ ಹಿಂದೆ ಮುಸ್ಲಿಂ ಟೊಪ್ಪಿಗೆ ಹಾಕಿ ನಮಾಜ್ ಮಾಡಿದ್ದು ಜನತು ಇನ್ನೂ ಮರೆತಿಲ್ಲ. ಈ ವಿಷಯ ಎಲ್ಲರಿಗೂ ಗೊತ್ತಿದೆ. ಯಾವ ರೀತಿ ಗೆದ್ದೀದ್ದೀರಿ ಎಂಬುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

`ವಿಜಯಪುರ ನಗರ ಶಾಸಕರ ವರ್ತನೆಯಿಂದ ಕಾರ್ಯಕರ್ತ ಬಂಧುಗಳಿಗೂ ತೊಂದರೆಯಾಗುತ್ತದೆ, ಹೀಗಾಗಿ ಎಲ್ಲವನ್ನೂ ಮರೆತು ಮುನ್ನಡೆಯೋಣ, ಇದು ರಾಜಿ-ಸಂಧಾನ ಎಂದರೂ ತಪ್ಪಿಲ್ಲ. ನನ್ನ ಕಡೆ ತಪ್ಪಾದರೂ ನಾನು ತಿದ್ದುಕೊಳ್ಳುವೆ, ಹೀಗಾಗಿ ತಮ್ಮ ವರ್ತನೆ ತಿದ್ದುಕೊಳ್ಳಿ, ಅವರ ಬಾಯಿಯಿಂದ ಉದುರುವ ಸುಸಂಸ್ಕೃತ ಶಬ್ದಗಳು ನಿಲ್ಲಲಿ. ವಿಜಯಪುರ ನಗರ ಶಾಸಕರು ಹಾಗೂ ನಾನು ಅಣ್ಣ ತಮ್ಮಿಂದರಂತೆ ಇದ್ದೇವೆ, ನನಗೆ ಯಾರು ಶತೃಗಳಿಲ್ಲ, ಎಲ್ಲರೂ ಒಂದಾಗಿ ಹೋಗೋಣ ಎಂದು ಹೇಳಿದ್ದರಿಂದ ನಾನು ಎಷ್ಟೇ ಅಸಮಾಧಾನವಿದ್ದರೂ ನಾನು ಅಸಮಧಾನ ಹೊರಹಾಕಿರಲಿಲ್ಲ, ಈಗ ನನ್ನ ಸಹನೆಯ ಕಟ್ಟೆಯೊಡೆದಿದೆ, ಇಲ್ಲವಾದರೆ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಆಗುತ್ತಿತ್ತು….’ ಎಂದು ಮಾಜಿ ಸಚಿವ ನಿರಾಣಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಸಹನೆಯಿಂದ ಸಹಿಸಿಕೊಂಡಿದ್ದಾರೆ, ಮೌನ ವಹಿಸಿದ್ದಾರೆ, ಸಹನೆ ಕಟ್ಟೆ ಒಡೆದರೆ ಅವರು ಸಹ ತಮ್ಮ ನಿಲುವು ಸ್ಪಷ್ಟಪಡಿಸುವುರು ಎಂದರು.

ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ವಿಜುಗೌಡ ಪಾಟೀಲ, ಇಂಡಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ, ನಾಗಠಾಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂಜೀವ ಐಹೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Latest Indian news

Popular Stories