ಭೀಕರ ಅಪಘಾತ: ಅತ್ತೆ, ಅಳಿಯ ಸಾವು, ಇಬ್ಬರು ಮಕ್ಕಳು ಚಿಂತಾಜನಕ

ವಿಜಯಪುರ: ಭಾರಿ ವಾಹನವೊಂದು ಎರಡು ಬೈಕಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಚಕ್ರದಡಿ ಸಿಲುಕಿದ ಅತ್ತೆ ಹಾಗೂ ಅಳಿಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಇನ್ನೋರ್ವ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದ ತಂಗಡಗಿಯಲ್ಲಿ ಸಂಭವಿಸಿದೆ.

ಮೃತರನ್ನು ಹೆದ್ದಾರಿ ಪಕ್ಕದಲ್ಲೇ ಇರುವ ಮುದ್ನಾಳ ಗ್ರಾಮದ ಶರಣಮ್ಮ ಕಂಬಳಿ (55) ಮತ್ತು ಅಳಿಯ ನಾಗೇಶ ಶಿವಪೂರ (35) ಎಂದು ಗುರ್ತಿಸಲಾಗಿದೆ. ನಾಗೇಶ ಅವರ ಮಕ್ಕಳ ಕೃತಿಕಾ (10) ಮತ್ತು ಭೂಮಿಕಾ (8) ಅವರಿಗೆ ಗಂಭಿರಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಇನ್ನೋರ್ವ ಬೈಕ್ ಸವಾರನನ್ನು ಸುಧೀರ ಬೇನಾಳ ಎನ್ನಲಾಗಿದೆ.

ಅತ್ತೆ ಮತ್ತು ಅಳಿಯ ಇಬ್ಬರೂ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಎದುರು ಇರುವ ಮಿನಿ ಕಾಯಿಪಲ್ಯೆ ಮಾರ್ಕೆಟನಲ್ಲಿ ತರಕಾರಿ ಮಾರುವ ಕಾಯಕದಲ್ಲಿ ನಿರ್ವಹಿಸುತ್ತಿದ್ದು, ರಾತ್ರಿ ದಿನದ ವ್ಯಾಪಾರ ಮುಗಿಸಿಕೊಂಡು ಮಕ್ಕಳ ಸಮೇತ ಊರಿಗೆ ಬೈಕನಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ. ಕೇವಲ ಒಂದು ಕಿಮಿ ಅಂತರ ಕ್ರಮಿಸಿದ್ದರೆ ಇವರು ಸುರಕ್ಷಿತವಾಗಿ ಮನೆ ಸೇರುತ್ತಿದ್ದರು. ಆದರೆ ಜವರಾಯ ಲಾರಿಯ ರೂಪದಲ್ಲಿ ಇವರ ಮೇಲೆರಗಿ ಪ್ರಾಣವನ್ನೇ ಕಸಿದದ್ದೂ ಅಲ್ಲದೆ ಮಕ್ಕಳನ್ನೂ ತಂದೆ ಇಲ್ಲದ ತಬ್ಬಲಿಯನ್ನಾಗಿ ಮಾಡಿದೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.

Latest Indian news

Popular Stories