ವೈದ್ಯಕೀಯ ಲೋಕದ ವಿಚಿತ್ರ ಕೇಸ್: ವ್ಯಕ್ತಿಯ ಹೊಟ್ಟೆಯಲ್ಲಿತ್ತು ರಾಖಿ, ಇಯರ್​ಫೋನ್, ಕೀ ಸೇರಿ 100 ವಸ್ತುಗಳು

ಚಂಡೀಘಡ: ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರೇ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ಹೌಹಾರಿದ್ದು, ಆತನ ಹೊಟ್ಟೆಯಲ್ಲಿ ರಾಖಿ, ಇಯರ್​ಫೋನ್, ಕೀ ಸೇರಿ 100 ವಸ್ತುಗಳು ಪತ್ತೆಯಾಗಿವೆ.

ಹೌದು.. ಪಂಜಾಬ್​ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು ಕಳೆದ ಎರಡು ದಿನಗಳಿಂದ ತುಂಬಾ ಹೊಟ್ಟೆನೋವು ಬರುತ್ತಿದೆ ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್​-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸುಮಾರು ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರಿಗೆ ಕಾದಿತ್ತು ಅಚ್ಚರಿ, ರಾಖಿ, ಇಯರ್​ಫೋನ್, ಬೀಗ, ಕೀ ಸೇರಿ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 100ಕ್ಕೂ ಅಧಿಕ ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದರು.

ಈ ಬಗ್ಗೆ ಮೆಡಿಸಿಟಿ ನಿರ್ದೇಶಕ ಡಾ ಅಜ್ಮೀರ್ ಕಲ್ರಾ ಅವರು ಮಾತನಾಡಿ, ತಮ್ಮ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ, ಆದರೆ ವೈದ್ಯರು ಈ ಎಲ್ಲಾ ವಸ್ತುಗಳನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ ಎಂದಿದ್ದಾರೆ.

ಆದರೆ, ಈ ವಸ್ತುಗಳು ಹೊಟ್ಟೆಯಲ್ಲಿ ಬಹಳ ಸಮಯ ಇದ್ದ ಕಾರಣ ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ಅವರು ಹೇಳಿದರು. ಇದೇ ವಿಚಾರವಾಗಿ ರೋಗಲಕ್ಷಣಗಳು ಉಲ್ಬಣಗೊಂಡ ನಂತರ ಮತ್ತು ಅವರು ನಿದ್ರಿಸಲು ಸಹ ಸಾಧ್ಯವಾಗಲಿಲ್ಲ, ನಾವು ವೈದ್ಯರನ್ನು ಸಂಪರ್ಕಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಈ ಎಲ್ಲಾ ವಸ್ತುಗಳನ್ನು ಹೇಗೆ ತಿಂದಿದ್ದಾರೆ ಎಂಬುದು ಮಾತ್ರ ನಮಗೆ ತಿಳಿದಿಲ್ಲ, ಅವರಿಗೆ ಮಾನಸಿಕ ಸಮಸ್ಯೆ ಇರಬಹುದು ಎಂದು ಊಹಿಸಲಾಗಿದೆ. ಈ ವ್ಯಕ್ತಿ ಎರಡು ವರ್ಷಗಳಿಂದ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವಸ್ತುಗಳು ದೀರ್ಘಕಾಲದವರೆಗೆ ಅವರ ಹೊಟ್ಟೆಯೊಳಗೆ ಇದ್ದವು ಮತ್ತು ಇದು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಹಲವಾರು ವೈದ್ಯರ ಬಳಿಗೆ ಕರೆದೊಯ್ದಿದ್ದರು ಆದರೆ ಅವರ ನೋವಿನ ಹಿಂದಿನ ಕಾರಣವನ್ನು ಯಾರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

Latest Indian news

Popular Stories