ಇರಾನ್‌ನಿಂದ ಭಾರತೀಯರಿಗೆ ವೀಸಾರಹಿತ ಪ್ರವಾಸ ಸೌಲಭ್ಯ

ಹೊಸದಿಲ್ಲಿಯಲ್ಲಿರುವ ಇರಾನ್‌ನ ರಾಯಭಾರ ಕಚೇರಿಯು ಮಂಗಳವಾರ ಈ ಸಂಬಂಧ ಅಧಿಕೃತ ಘೋಷಣೆ ಮಾಡಿದೆ. ಇನ್ನು ಮುಂದೆ ಭಾರತೀ ಯರು 15 ದಿನಗಳ ಮಟ್ಟಿಗೆ ಇರಾನ್‌ಗೆ ವೀಸಾ ರಹಿತವಾಗಿ ಪ್ರವಾಸ ಕೈಗೊಳ್ಳಬಹುದಾಗಿದೆ. ಫೆ. 4 ರಿಂದ ಅನ್ವಯವಾಗುವಂತೆ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್ ಇರಾನ್‌ ಸರಕಾರ ಭಾರತೀಯರು ವೀಸಾರಹಿತವಾಗಿ ಇರಾನ್‌ ಪ್ರವಾಸ ಕೈಗೊಳ್ಳ ಬಹುದಾಗಿದೆ ಎಂದು ತಿಳಿಸಿದೆ. ಇದೇ ವೇಳೆ ಈ ವೀಸಾರಹಿತ ಸೌಲಭ್ಯ ಪಡೆಯಲು ಕೆಲವು ಷರತ್ತುಗಳನ್ನು ಕೂಡ ಇರಾನ್‌ ಸರಕಾರ ವಿಧಿಸಿದೆ.

ಭಾರತ ಮತ್ತು ಇರಾನ್‌ ನಡುವಣ ಸಂಬಂಧವನ್ನು ಪುನಃಸ್ಥಾಪಿಸುವ ಕ್ರಮವಾಗಿ ಇರಾನ್‌ ಸರಕಾರ ಈ ಘೋಷಣೆ ಮಾಡಿದೆ. ಇರಾನ್‌ನ ಈ ನಿರ್ಧಾರದಿಂದ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಯಾಗುವುದರ ಜತೆಯಲ್ಲಿ ಇರಾನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗಲಿದೆ. ಈ ಹಿಂದೆ ಇರಾನ್‌, ಭಾರತಕ್ಕೆ ಗರಿಷ್ಠ ಪ್ರಮಾಣದಲ್ಲಿ ತೈಲ ಪೂರೈಸುತ್ತಿತ್ತಾದರೂ ಅಮೆರಿಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಅವರು, ಇರಾನ್‌ ಮೇಲೆ ನಿರ್ಬಂಧಗಳನ್ನು ಹೇರಿದ ಬಳಿಕ ಇರಾನ್‌ನಿಂದ ಭಾರತಕ್ಕೆ ಪೂರೈಕೆಯಾಗುತ್ತಿದ್ದ ತೈಲದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.

ಇರಾನ್‌ಗೆ ಪ್ರವಾಸ ತೆರಳಬಯಸುವ ಭಾರತೀಯರು ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್‌ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ವೀಸಾರಹಿತವಾಗಿ ಭೇಟಿ ನೀಡುವ ಭಾರತೀಯರು ಗರಿಷ್ಠ 15 ದಿನಗಳವರೆಗೆ ಇರಾನ್‌ನಲ್ಲಿ ತಂಗಬಹುದಾಗಿದೆ. ಆದರೆ ಈ ಅವಧಿಯನ್ನು ಯಾವ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಅಷ್ಟು ಮಾತ್ರವಲ್ಲದೆ ಪ್ರತೀ ಆರು ತಿಂಗಳುಗಳಿಗೊಮ್ಮೆ ಭಾರತೀಯರು ವೀಸಾರಹಿತವಾಗಿ ಇರಾನ್‌ಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರವಾಸದ ದೃಷ್ಟಿಯಿಂದ ಇರಾನ್‌ಗೆ ಭೇಟಿ ನೀಡುವವರಿಗೆ ಮಾತ್ರವೇ ಈ ವೀಸಾರಹಿತ ಸೌಲಭ್ಯ ಅನ್ವಯವಾಗಲಿದೆ.

ದೀರ್ಘ‌ಕಾಲ ಇರಾನ್‌ನಲ್ಲಿ ಉಳಿಯ ಬಯಸುವವರು ಮತ್ತು ಆರು ತಿಂಗಳ ಅವಧಿಯಲ್ಲಿ ಪದೇ ಪದೆ ಇರಾನ್‌ಗೆ ಭೇಟಿ ನೀಡ ಬಯಸುವವರು ಕಡ್ಡಾಯವಾಗಿ ಹಾಲಿ ನಿಯಮಾವಳಿಗಳಂತೆಯೇ ರಾಯಭಾರ ಕಚೇರಿಯಿಂದ ವೀಸಾವನ್ನು ಪಡೆಯಬೇಕು. ವಾಣಿಜ್ಯ, ವ್ಯವಹಾರ ಮತ್ತಿತರ ಉದ್ದೇಶಗಳಿಗಾಗಿ ಇರಾನ್‌ಗೆ ಭೇಟಿ ನೀಡುವವರು ವೀಸಾ ಹೊಂದಿರುವುದು ಅತ್ಯಗತ್ಯ.

ವಾಯು ಮಾರ್ಗದ ಮೂಲಕ ಇರಾನ್‌ಗೆ ಪ್ರಯಾಣಿಸುವ ಭಾರತೀಯರಿಗೆ ಮಾತ್ರವೇ ಈ ವೀಸಾರಹಿತ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. ಭೂ ಮತ್ತು ಜಲಸಾರಿಗೆ ಮೂಲಕ ಇರಾನ್‌ ಪ್ರವಾಸ ಕೈಗೊಳ್ಳಲಿಚ್ಛಿಸುವವರಿಗೆ ವೀಸಾರಹಿತ ಪ್ರಯಾಣದ ಸೌಲಭ್ಯ ಅನ್ವಯಿಸದು.

Latest Indian news

Popular Stories