ಬೆಂಗಳೂರು ಸೇರಿ ಹಲವೆಡೆ ಇಂದೂ 38 ವಿಸ್ತಾರ ವಿಮಾನ ಸಂಚಾರ ರದ್ದು, ವರದಿ ಕೇಳಿದ ಕೇಂದ್ರ

ನವದೆಹಲಿ, ಏಪ್ರಿಲ್ 2: ವಿಸ್ತಾರ ವಿಮಾನಯಾನ (Vistara Airlines) ಸಂಸ್ಥೆಯ ಸಂಕಷ್ಟ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಂಚರಿಸಬೇಕಿದ್ದ 38 ವಿಮಾನಗಳ ಹಾರಾಟ ರದ್ದುಗೊಂಡಿದೆ. ಪೈಲಟ್‌ಗಳ ಲಭ್ಯತೆಯಿಲ್ಲದ ಕಾರಣ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಮುಂಬೈನಿಂದ 15 ವಿಮಾನಗಳು, ದೆಹಲಿಯಿಂದ 12 ಮತ್ತು ಬೆಂಗಳೂರಿನಿಂದ 11 ವಿಮಾನಗಳ ಹಾರಾಟ ರದ್ದಾಗಿವೆ. ಸೋಮವಾರ 50 ಕ್ಕೂ ಹೆಚ್ಚು ವಿಸ್ತಾರಾ ವಿಮಾನಗಳ ಸಂಚಾರ ರದ್ದುಗೊಂಡಿತ್ತು. ನಂತರ ಸುಮಾರು 160 ವಿಮಾನಗಳು ವಿಳಂಬವಾಗಿ ಹಾರಾಟ ಆರಂಭಿಸಿದ್ದವು.

ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾಗಿ ಬಂದಿರುವ ಬಗ್ಗೆ ಪ್ರಯಾಣಿಕರು ಸೋಮವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗಮನಾರ್ಹ ಸಂಖ್ಯೆಯ ವಿಮಾನ ರದ್ದುಗೊಂಡಿದ್ದು, ಅನೇಕ ವಿಮಾನಗಳು ವಿಳಂಬವಾಗಿ ಸಂಚಾರ ಮಾಡಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ವಿಸ್ತಾರ ವಿಮಾನಯಾನ ಸಂಸ್ಥೆಯ ಪ್ರಕಟಣೆ ಸೋಮವಾರ ತಿಳಿಸಿತ್ತು.

Latest Indian news

Popular Stories