ಕೋವಿಡ್ ಗೆ ಬಲಿಯಾದ ಉಳಿದ ಸಿಬ್ಬಂದಿಗಳಿಗೂ ತಕ್ಷಣ ಪರಿಹಾರ ಒದಗಿಸಿ: ರಾಜ್ಯ ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಒತ್ತಾಯ

ಬೆಂಗಳೂರು: ಕೋವಿಡ್ 19 ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ರಾಜ್ಯ ಸಾರಿಗೆ ನಿಗಮದ ಕುಟುಂಬಗಳಿಗೆ ಕೂಡಲೇ ಪರಿಹಾರಧನ ಬಿಡುಗಡೆಗೊಳಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಒಟ್ಟು 351 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಬಗ್ಗೆ ಆರ್,ಟಿ.ಐ ನಿಂದ ಮಾಹಿತಿ ಪಡೆದ ವೆಲ್ಫೇರ್ ಪಾರ್ಟಿಯು ಆ ಮಾಹಿತಿಯ ಮುಖಾಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 80 ಜನ ಸಿಬ್ಬಂದಿಗಳು ಬಲಿಯಾಗಿದ್ದು, ಹಾಗೆಯೇ ಬಿ.ಎಂ.ಟಿ.ಸಿಯಲ್ಲಿ 110 ಜನ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 64 ಜನ ಸಿಬ್ಬಂದಿಗಳು ಪ್ರಾಣಕಳಕೊಂಡಿದ್ದಾರೆ. ಹಾಗೆಯೇ ಕನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 96 ಜನ ಸಿಬ್ಬಂದಿಗಳು ಪ್ರಾಣ ಕಳಕೊಂಡಿದ್ದಾರೆ. ಈ ಸಂತ್ರಸ್ಥರಲ್ಲಿ ಹಿಂದಿನ ಬಿಜೆಪಿ ಸರಕಾರ ಕೇವಲ ಹನ್ನೊಂದು ಕುಟುಂಬಗಳಿಗೆ ಮಾತ್ರ ಪರಿಹಾರಧನ ನೀಡಿದೆ. ಆಗಿನ ಬಿಜೆಪಿ ಸರಕಾರ ಬಲಿಯಾದ ಪ್ರತೀ ಕುಟುಂಬಗಳಿಗೆ ತಲಾ 30 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿಯ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿತ್ತು. ಸಾರಿಗೆ ಸಚಿವರನ್ನು ಕೂಡಾ ಬೇಟಿಯಾಗಿ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿತ್ತು. ಆದರೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕಿರಲಿಲ್ಲ. ಈ ಬಗ್ಗೆ ಪ್ರಸಕ್ತ ನೂತನ ಸರಕಾರದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರನ್ನು ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ರ ನೇತೃತ್ವದ ತಂಡವು ಬೇಟಿಯಾಗಿ ಸಮರ್ಪಕ ದಾಖಲೆ ಒದಗಿಸಿ, 340 ಕುಟುಂಬಗಳು ಇನ್ನೂ ಕೂಡಾ ಪರಿಹಾರ ಸಿಗದೆ ಅತಂತ್ರ ಸ್ಥಿತಿಯಲ್ಲಿದೆ. ಅವರ ಬದುಕು ಶೋಚನೀಯವಾಗಿದೆ. ಮನೆಯ ಯಜಮಾನನೇ ಈ ಮಹಾಮಾರಿಗೆ ಬಲಿಯಾಗಿರುವಾಗ ಈ ಕುಟುಂಬದ ಸಂಕಷ್ಟದ ಬಗ್ಗೆ ಗಮನವಿಟ್ಟು ಆಲಿಸಿ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿ ಒತ್ತಾಯಿತು. ಈ ನಿಯೋಗದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾಖಾನ್, ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮದ್ ಮತ್ತು ಬೆಂಗಳೂರು ನಗರ ಉಪಾಧ್ಯಕ್ಷರಾದ ಎ.ಪ್ರಭಾಕರ್ ಜೊತೆಗಿದ್ದರು.

ರಿಜ್ವಾನ್ ತಾಜ್
(ಮಾಧ್ಯಮ ಸಂಚಾಲಕ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ)

Latest Indian news

Popular Stories