Featured StoryState News

ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಸಿಗದಿರುವ ಸಾಧ್ಯತೆಯಿದೆ – ಯಡಿಯೂರಪ್ಪ

ಕಲಬುರಗಿ: ರಾಜ್ಯಾದ್ಯಂತ ಈ ಬಾರಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಹಾಲಿ ನಾಲ್ಕೈದು ಶಾಸಕರ ಟಿಕೆಟ್ ಸಿಗದಿರುವ ಸಾಧ್ಯತೆಯಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಇಲ್ಲಿನ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾದನಿ ಯಾತ್ರೆಯಲ್ಲಿ ಜನರು ಸೇರುತ್ತಿಲ್ಲ. ಮತ್ತೊಂದೆಡೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಕಷ್ಟು ಜನರು ಸೇರುತ್ತಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ ಎಂಬುದನ್ನು ಸಾಬೀತುಪಡಿಸುವಂತಿದೆ ಎಂದರು.

ಇತ್ತೀಚೆಗೆ ನಡೆದ ತ್ರಿಪುರಾ, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಏನು ಎಂಬುದು ಸಾಬೀತಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಅಡ್ರೆಸ್ ಕಳೆದುಕೊಂಡಿರುವುದು ಮತ್ತೊಮ್ಮೆ ದೃಢಪಟ್ಟಿದೆ ಎಂದರು.

ಬೊಮ್ಮಾಯಿ ನೇತೃತ್ವ: ರಾಜ್ಯದಲ್ಲಿ ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿದ ಬಳಿಕ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ನಿರ್ಧಾರ ಆಗಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವರಾದ ವಿ.ಸೋಮಣ್ಣ ಹಾಗೂ ನಾರಾಯಣಗೌಡ ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅವರಷ್ಟೇ ಅಲ್ಲ ಯಾರೊಬ್ಬರೂ ಪಕ್ಷ ಬಿಡುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಯಾರಾದರೂ ಬರುವುದಾದರೆ ಮುಕ್ತ ಸ್ವಾಗತವಿದೆ ಎಂದು ಆಹ್ವಾನ ನೀಡಿದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button