
ಅಡ್ಜೆಸ್ಟ್ ಮೆಂಟ್ ರಾಜಕಾರಣದ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇನೆ: ಶಾಸಕ ಯತ್ನಾಳ
ವಿಜಯಪುರ : ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಇಲ್ಲಿನ ಅಡ್ಜೆಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಸುದೀರ್ಘವಾಗಿ ವರಿಷ್ಠ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಆ ನಿರ್ದೇಶನ ನೀಡಿದೆ, ತರಾಟೆಗೆ ತೆಗೆದುಕೊಂಡಿದೆ ಎಂಬುದು ಶುದ್ಧ ಸುಳ್ಳು, ಕೇಂದ್ರ ಗೃಹ ಸಚಿವ ಅಮೀತ್ ಷಹಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಇಲ್ಲಿನ ವಿದ್ಯಮಾನ ವಿವರಿಸಿದ್ದೇನೆ, ಸುದೀರ್ಘ 25 ನಿಮಿಷಗಳ ಕಾಲ ಬಿಜೆಪಿಯ ಅಡ್ಜೆಸ್ಟಮೆಂಟ್ ರಾಜಕಾರಣ ಮೊದಲಾದ ಪ್ರಹಸನಗಳನ್ನು ವಿವರಿಸಿದ್ದೇನೆ ಎಂದರು.
ಇನ್ನೂ ನಾನು ಬಿಜೆಪಿಗೆ ಘರ್ ವಾಪಾಸ್ ಆಗಲು ಬಿ.ಎಸ್. ಯಡಿಯೂರಪ್ಪ ಅವರು ಕಾರಣವಲ್ಲ, ವಿಜಯೇಂದ್ರನ ಬೆಂಬಲಿಸುವ ಸಾಮಾಜಿಕ ಜಾಲತಾಣದಲ್ಲಿ ನಾನು ಉಪಕಾರ ಮರೆಯಬಾರದು ಎಂದು ಪ್ರಚಾರ ಮಾಡುತ್ತಿದ್ದಾರೆ, ವಾಸ್ತವವಾಗಿ ಬಿ.ಎಸ್. ಯಡಿಯೂರಪ್ಪ ಅವರು ನಾನು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮೀತ್ ಷಹಾ ಅವರೇ ನನಗೆ ಖುದ್ದು ಪಕ್ಷಕ್ಕೆ ಬರುವಂತೆ ಹೇಳಿದಾಗ ಪಕ್ಷೇತರ ವಿಧಾನ ಪರಿಷತ್ ಸದಸ್ಯನಾಗಿದ್ದ ನಾನು ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಹಗರಣ ಸಿಬಿಐಗೆ ವಹಿಸಲಿ
ಕೋವಿಡ್ ಕಾಲಘಟ್ಟದಲ್ಲಿ ದೊಡ್ಡ ಹಗರಣ ನಡೆದಿದೆ, ಕೋವಿಡ್ ಕಿಡ್ಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ರಾಜ್ಯ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಎಲ್ಲವೂ ಬಯಲಿಗೆಳೆಯುವೆ ಎಂದು ಯತ್ನಾಳ ಮತ್ತೊಮ್ಮೆ ಗುಡುಗಿದರು.
ಇನ್ನೂ ಕಾಂಗ್ರೆಸ್ ಸರ್ಕಾರ ಕೂಡಲೇ ಇದನ್ನು ಸಿಬಿಐಗೆ ವಹಿಸಬೇಕು ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ನವರು ಇದರಲ್ಲಿ ಶಾಮೀಲಿದ್ದಾರೆ ಎಂಬ ಆರೋಪವನ್ನು ಹೊರೆಸಿದರು.
ಗುಮ್ಮಟ ನಗರಿಯಲ್ಲಿ ಲಕ್ಷ ದೀಪೋತ್ಸವ
ರಾಮಮಂದಿರ ನಿರ್ಮಾಣಗೊಂಡಿರುವುದು ಪ್ರತಿಯೊಬ್ಬರು ಹೆಮ್ಮೆಯ ಸಂಕೇತ. ರಾಮಮಂದಿರ ಸಮಸ್ತ ಹಿಂದೂಗಳ ಸ್ವಾಭಿಮಾನದ ಸಂಕೇತವಾಗಿದೆ. ರಾಮಮಂದಿರ ನಿರ್ಮಾಣ ಘಳಿಗೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಇಡೀ ನಗರವೇ ದೀಪಗಳಿಂದ ಕಂಗೊಳಿಸಲಿದೆ, ಒಂದು ರೀತಿ ದೀಪಾವಳಿ ಹಬ್ಬದ ಸಂಭ್ರಮ ಸೃಷ್ಟಿಯಾಗಲಿದೆ ಎಂದರು.
ಎಲ್ಲ ದೇವಾಲಯಗಳ ಆಡಳಿತ ಮಂಡಳಿ ಸಭೆ ಕರೆದು ಅಂದು ಭಜನೆ, ಹೋಮ-ಹವನ ಕೈಗೊಳ್ಳುವಂತೆ ಕೋರಲಾಗುವುದು, ನಗರದಲ್ಲಿ ಲಕ್ಷ ದಿಪೋತ್ಸವ ಆಯೋಜನೆ ಮಾಡಲಾಗುವುದು, ಅಂದು ಕೇವಲ ನಗರದಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಎಂಬ ಘೋಷಣೆಯೊಂದೇ ಕೇಳಿ ಬರಬೇಕು, ಆ ನಿಟ್ಟಿನಲ್ಲಿ ನಮ್ಮ ಸಿದ್ಧತೆ ನಡೆಯಲಿದೆ ಎಂದರು.




