ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಾಯಕರಿಬ್ಬರ ವಾಕ್ಸಮರ: ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದ ಯತ್ನಾಳ್, ರಾಜಿ ಮಾಡಿಕೊಂಡಿಲ್ಲ ಎಂದ ಬೊಮ್ಮಾಯಿ

ಬೆಳಗಾವಿ: ನಗರದಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ವಾಕ್ಸಮರ ನಡೆಯಿತು.

ಸಭೆಯಲ್ಲಿ ಮೊದಲು ಮಾತನಾಡಿದ ಮೊದಲು ಮಾತನಾಡಿದ ಯತ್ನಾಳ್‌ ಅವರು, ಕಾಂಗ್ರೆಸ್‌ ಸರ್ಕಾರ ಐದು ವರ್ಷ ಉಳಿಯುವುದಿಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವುದಿಲ್ಲ. ಆಗ ಡಿ.ಕೆ.ಶಿವಕುಮಾರ್ ಅವರು ಬಸವರಾಜ ಬೊಮ್ಮಾಯಿ ಅವರ ಮನೆಗೆ ಬರುತ್ತಾರೆ. ಆ ಮೂಲಕ ಸೋನಿಯಾ ಗಾಂಧಿ ಅವರನ್ನು ಹೆದರಿಸಲು ಯತ್ನಿಸುತ್ತಾರೆ. ಬೊಮ್ಮಾಯಿ ಅವರೇ ಇಂಥದ್ದಕ್ಕೆ ಅವಕಾಶ ಕೊಡಬೇಡಿ. ಅಂಥವರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ’ ಎಂದು ಹೇಳಿದರು.

‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಈಚೆಗೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಸೌಜನ್ಯದ ಭೇಟಿ ಎನ್ನುತ್ತಾರೆ. ಆದರೆ, ಉದ್ದೇಶವೇ ಬೇರೆ. ಮುಖ್ಯಮಂತ್ರಿ ಕುರ್ಚಿಗಾಗಿ ಬರುವ ಅವರನ್ನು ನಾವೇಕೆ ಮನೆಗೆ ಬಿಟ್ಟುಕೊಳ್ಳಬೇಕು’ ಎಂದೂ ಪ್ರಶ್ನಿಸಿದರು.

ವಿರೋಧ ಪಕ್ಷದವರ ಜೊತೆಗೆ ಮಾತನಾಡುವುದಿಲ್ಲ, ಮನೆಗೆ ಹೋಗುವುದಿಲ್ಲ, ಅವರ ಮುಖವನ್ನೂ ನೋಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ರೀತಿ ನಾವು ಕೂಡ ಇನ್ನು ಮುಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗುವುದಿಲ್ಲ, ಫೋನಿನಲ್ಲಿ ಮಾತನಾಡುವುದಿಲ್ಲ, ಹಲ್ಲು ಕಿಸಿಯುವುದಿಲ್ಲ ಎಂದು ನಿರ್ಧಾರ ಮಾಡೋಣ. ಹಾಗಾದರೆ ಮಾತ್ರ ಪಕ್ಷ ಉಳಿಯುತ್ತದೆ. ನೀವು ಸ್ವಾಗತ–ಸುಸ್ವಾಗತ ಎಂದರೆ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ’ ಎಂದು ತಿಳಿಸಿದರು.

ಈ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಯಿಯವರು, ನಾನು ಎಂದಿಗೂ ರಾಜಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅದು ಕನ್ನಡಿಗರ ಸೌಜನ್ಯ. ಯಾರೋ ಮನೆಗೆ ಬಂದ ತಕ್ಷಣ ನಾವು ರಾಜಿ ಆಗುವುದಿಲ್ಲ ಗೌಡ್ರೆ. ನೀವು ತಲೆ ಕೆಡಿಸಿಕೊಳ್ಳಬೇಡಿ. ಕೆಲವರು ಮನೆಗೆ ಹೋಗದೆಯೇ ಒಳಗೊಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ’ ಎಂದು ಹೇಳಿದರು.

ಬಿಜೆಪಿ ಪಕ್ಷ ತಾಯಿಯ ಸಮಾನ. ಕಾರ್ಯಕರ್ತರು ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರ ಸಮಾನ. ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ’ ಎಂದರು.

Latest Indian news

Popular Stories