ಯತ್ನಾಳ್ ಉದ್ಯಮ ಪಾಲುದಾರರಲ್ಲ: ಸೈಯದ್ ಮುರ್ತುಜಾ ಹುಸೈನ್ ಹಾಶ್ಮಿ

ವಿಜಯಪುರ : ಶಾಸಕ ಯತ್ನಾಳ ಹಾಗೂ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆದಿರುವ ಬೆನ್ನಲ್ಲೇ ಹಾಸಿಂಪೀರ ದರ್ಗಾದಿಂದ ಹೇಳಿಕೆಯೊಂದು ಬಿಡುಗಡೆಯಾಗಿದೆ. ತನ್ವೀರ್ ಪೀರಾ ವಿವಾದಕ್ಕೂ ಹಾಸಿಂಪೀರ ದರ್ಗಾಕ್ಕೂ ಯಾವುದೇ ಸಂಬಂಧವಿಲ್ಲ, ವ್ಯವಹಾರಿಕವಾಗಿಯೂ ಯತ್ನಾಳ ನೇರ ಪಾಲುದಾರಿಕೆ ಹೊಂದಿಲ್ಲ ಎಂದು ಹಾಸಿಂಪೀರ ದರ್ಗಾದ ಪೀಠಾಧಿಪತಿ ಹೆಸರಿನಲ್ಲಿ ಮಾಧ್ಯಮ ಹೇಳಿಕೆ ಬಿಡುಡೆ ಮಾಡಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಲಿಖಿತ ಪ್ರಕಟಣೆ ನೀಡಿರುವ ಹಾಸಿಂಪೀರ ದರ್ಗಾದ ಪೀಠಾಧಿಪತಿಗಳಾದ ಸೈಯದ್ ಮುರ್ತುಜಾ ಹುಸೈನ್ ಹಾಸ್ಮಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ತನ್ವೀರ್ ಪೀರಾ ವಿವಾದದಿಂದಾಗಿ ಹಾಸಿಂ ಪೀರ ದರ್ಗಾದ ಭಕ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಹೀಗಾಗಿ ದರ್ಗಾದ ಹೊರಗೆ ಏನೇ ನಡೆದರೂ ಅಂಥ ವಿಷಯ ವಿವಾದಗಳಿಗೆ ಹಾಗೂ ದರ್ಗಾಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.

ವಿಜಯಪುರದ ಹಾಸಿಂಪೀರ ದರ್ಗಾ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದ ಜನರು ದರ್ಗಾದ ಭಕ್ತರನ್ನು ಹೊಂದಿರುವ ಭಾವೈಕ್ಯತೆ ಸಾರುವ ಧಾರ್ಮಿಕ ಕೇಂದ್ರವಾಗಿದೆ. ದರ್ಗಾದಲ್ಲಿ ನಡೆಯುವ ಎಲ್ಲ ಧಾರ್ಮಿಕ ಆಚರಣೆಗಳು ದರ್ಗಾದ ಮುಖ್ಯಸ್ಥರಾದ ಸಜ್ಜಾದೆ ನಾಶೀನ್ ಮುತವಲ್ಲಿ ನೇತೃತ್ವದಲ್ಲಿ ನಡೆಯುತ್ತಿವೆ ಎಂದು ವಿವರಿಸಿದ್ದಾರೆ.

ಹೀಗಾಗಿ ದರ್ಗಾದ ಹೊರಗೆ ಏನೇ ನಡೆದರೂ ಅದಕ್ಕೂ ದರ್ಗಾಕೆ ಯಾವುದೇ ಸಂಬಂಧವಿಲ್ಲ. ಶಾಸಕ ಯತ್ನಾಳ ಹಾಗೂ ತನ್ವೀರ್ ಪೀರಾ ಅವರ ಮಧ್ಯೆ ನಡೆಯುತ್ತಿರುವ ವಿವಾದಕ್ಕೂ ಹಾಗೂ ಹಾಸಿಂಪೀರ ದರ್ಗಾಕ್ಕೂ ಯಾವುದೇ ಸಂಬಂಧವಿಲ್ಲ. ಇಂಥ ವಿವಾದಗಳಿಗೆ ದರ್ಗಾ ಹೊಣೆಯೂ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದರ ಮಧ್ಯೆ ವಿಜಯಪುರ ನಗರದಲ್ಲಿರುವ ಟೂರಿಸ್ಟ್ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಪಾಲುದಾರಿಕೆ ಹೊಂದಿಲ್ಲ. ಸದರಿ ಹೊಟೇಲ್ ಆಸ್ತಿ ನಮ್ಮ ತಂದೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ತಂದೆ 1973 ರಲ್ಲಿ ವಿಯಪುರ ಮುನ್ಸಿಪಲ್‍ನಿಂದ ಲೀಸ್ ಮೇಲೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.

ಟೂರಿಸ್ಟ್ ಹೋಟೆಲ್ ಉದ್ಯಮದಲ್ಲಿ ಶಾಸಕ ಯತ್ನಾಳ್ ನೇರ ವ್ಯವಹಾರ ಹಾಗೂ ಪಾಲುದಾರಿಕೆ ಹೊಂದಿಲ್ಲ. ಹೀಗಾಗಿ ಶಾಸಕ ಯತ್ನಾಳ ಹಾಗೂ ತನ್ವೀರ್ ಪೀರಾ ಮಧ್ಯದ ವಿವಾದಕ್ಕೆ ಹಾಸಿಂಪೀರ ದರ್ಗಾಕ್ಕೆ ಯಾವುದೇ ಸಂಬಂಧವಿಲ್ಲ. ಕಾರಣ ದರ್ಗಾದ ಭಕ್ತರು ಅನಗತ್ಯವಾಗಿ ಯಾವುದೇ ಗೊಂದಲ ಮಾಡಿಕೊಳ್ಳಂತೆ ಹಾಸಿಂಪೀರ ದರ್ಗಾದ ಪೀಠಾಧಿಪತಿ ಸೈಯದ್ ಮುರ್ತುಜಾ ಹುಸೇನಿ ಹಾಸ್ಮಿ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

Latest Indian news

Popular Stories