ಬಿಜೆಪಿ ಅಂತರಿಕ ಕಲಹ: ಮೈಸೂರು ಚಲೋಗೆ ಸೆಡ್ಡು ಹೊಡೆದು BSY-BYV ವಿರುದ್ಧ BJP ಬಂಡಾಯ ನಾಯಕರ ಸಭೆ | ಕೂಡಲಸಂಗಮ-ಬಳ್ಳಾರಿ ಪಾದಯಾತ್ರೆ’ಗೆ ಪ್ಲ್ಯಾನ್‌ !

ಬೆಳಗಾವಿ: ಮುಡಾ ಹಗರಣದ ವಿರುದ್ಧದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿಯ ಅತೃಪ್ತ ನಾಯಕರು ಬಳ್ಳಾರಿ ಯಾತ್ರೆಗೆ ಮುಂದಾಗಿದ್ದಾರೆ. ಸೆಪ್ಟೆಂಬರ್ 17ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಒಪ್ಪದಿರುವ ಬಿಜೆಪಿಯ ಒಂದು ತಂಡ ನಿನ್ನೆ ಗೌಪ್ಯ ಸ್ಥಳದಲ್ಲಿ ಸಭೆ ನಡೆಸಿದ್ದು, ಒಗ್ಗಟ್ಟಿನ ಪ್ರದರ್ಶನವೇ ಮಾಡಿದೆ. ಬೆಳಗಾವಿಯ ಹೊರವಲಯದಲ್ಲಿ 12ಕ್ಕೂ ಹೆಚ್ಚು ಬಿಜೆಪಿಯ ಘಟಾನುಘಟಿ ನಾಯಕರು ಗೌಪ್ಯ ಸಭೆ ನಡೆಸಿ, ಹೊಸ ಸಮರಕ್ಕೆ ಸಿದ್ಧರಾಗಿದ್ದಾರೆ.

ಬೆಳಗಾವಿಯ ಹೊರವಯಲದಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ರೆಬೆಲ್​ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ 12ಕ್ಕೂ ಹೆಚ್ಚು ಮಂದಿ ಬಿಜೆಪಿ ನಾಯಕರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್​ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಬಿಎಸ್​ವೈ ಮಾಜಿ ಆಪ್ತ ಸಹಾಯಕ ಭಾಗಿಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ. ಜಿ.ಎಂ.ಸಿದ್ದೇಶ್ವರ್, ಬಿ.ಪಿ.ಹರೀಶ್, ಎನ್.ಆರ್.ಸಂತೋಷ್ ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಅನುಮತಿ ಪಡೆದು ವಾಲ್ಮೀಕಿ ನಿಗಮದಲ್ಲಿನ 187 ಕೋಟಿ ರೂ.ಗಳ ಹಗರಣ ಖಂಡಿಸಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ, ವಾಲ್ಮೀಕಿ ನಿಗಮದ ಹಗರಣವನ್ನು ಖಂಡಿಸಿ ರ್ಯಾಲಿ ನಡೆಸಿತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಕಾರಣವಾಗಿದ್ದರೂ, ಯಡಿಯೂರಪ್ಪ ವಿರುದ್ಧ ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶ ಇದಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನಕ್ಕೆ ಅವಕಾಶ ಕಲ್ಪಿಸಲು ವಿಜಯೇಂದ್ರ ಅವರು ಮೈಸೂರು ಪಾದಯಾತ್ರೆಯನ್ನು ವ್ಯವಸ್ಥಿತವಾಗಿ ಯೋಜಿಸಿದ್ದರು ಎಂದು ಕೆಲ ನಾಯಕರು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಉತ್ತರ ಕರ್ನಾಟಕ ಭಾಗದ ಬಂಡಾಯ ಬಿಜೆಪಿ ನಾಯಕರು ವಿಜಯೇಂದ್ರ ಮಾಡುತ್ತಿರುವ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೈಕಮಾಂಡ್‌ಗೆ ಸಂದೇಶ ನೀಡಲು ಈ ಸಮಾವೇಶವನ್ನು ಆಯೋಜಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಬೆಳಗಾವಿ ಮತ್ತು ಗೋವಾ ಗಡಿಯಲ್ಲಿರುವ ಹೋಟೆಲ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆದಿದ್ದು, ಸಭೆಯಲ್ಲಿ ಸೆಪ್ಟೆಂಬರ್ 17 ರಿಂದ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಭೆಯಲ್ಲಿ ಪಾದಯಾತ್ರೆ ವೇಳೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಬಗ್ಗೆಯೂ ಚರ್ಚಿಸಿದ್ದು, ಪಾದಯಾತ್ರೆ ಕುರಿತು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಇದು ಬಿಜೆಪಿ ಬಂಡಾಯ ನಾಯಕರು ಅಥವಾ ಅತೃಪ್ತ ಶಾಸಕರ ಸಭೆಯಲ್ಲ. ಸಭೆಯು ಸಾಂದರ್ಭಿಕವಾಗಿದ್ದು, ಇತ್ತೀಚಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಮತ್ತು ಬಿಜೆಪಿಯನ್ನು ಸಂಘಟಿಸುವಂತಹ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು ಎಂದು ಹೇಳಿದರು.

Latest Indian news

Popular Stories