ತೆಲಂಗಾಣ ಚುನಾವಣೆ | ಸಚಿವ ಜಮೀರ್ ಅಹ್ಮದ್ ವಾಸವಿದ್ದ ಹೊಟೇಲ್‌ ಮೇಲೆ ಪೊಲೀಸರಿಂದ ದಾಳಿ

ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿರುವ ಕರ್ನಾಟಕದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ತಂಗಿದ್ದ ಹೋಟೆಲ್‌ ಮೇಲೆ ಹೈದರಾಬಾದ್‌ ಪೊಲೀಸರು ಬುಧವಾರ ತಡರಾತ್ರಿ ದಾಳಿ ನಡೆಸಿರುವ ಘಟನೆ ನಡೆದಿದೆ.

ಅಕ್ರಮವಾಗಿ ಹಣ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ಜಮೀರ್‌ ವಾಸ್ತವ್ಯವಿದ್ದ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ ಮೇಲೆ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ದಾಳಿ ನಡೆಸಿ ಜಮೀರ್ ಕೊಠಡಿ ಮತ್ತು ಬೆಂಬಲಿಗರ ಕೊಠಡಿಗಳನ್ನು ಪರಿಶೀಲಿಸಿದ್ದಾರೆ.

ಈ ದಾಳಿ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್‌, ‘ನಾನು ಉಳಿದುಕೊಂಡಿರುವ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿದರು. ಆದರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು’ ಎಂದು ತಿಳಿಸಿದ್ದಾರೆ.

‘ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್‌ ಸರ್ಕಾರ ಹತಾಶೆಗೊಂಡಿದೆ, ಜಂಟಿ ರಾಜಕೀಯ ದಾಳಿ ನಡೆಸಿವೆ. ಈ ದಾಳಿಯು ನಮ್ಮನ್ನು ಹೆದರಿಸಿ ಹಿಮ್ಮೆಟ್ಟಿಸುವ ಕುತಂತ್ರವಾಗಿದೆ. ಇದಕ್ಕೆಲ್ಲ ನಾವು ಹೆದರಲ್ಲ’ ಎಂದು ಜಮೀರ್ ಅಹ್ಮದ್ ಖಾನ್ ಆಕ್ರೋಶ ಹೊರಹಾಕಿದ್ದಾರೆ.

Latest Indian news

Popular Stories