ಮೆಕ್ಸಿಕೋ: ವಾಯುವ್ಯ ಮೆಕ್ಸಿಕೋದಲ್ಲಿ ವಿದೇಶಿ ವಲಸಿಗರು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದರಕ್ಕೆ ಬಿದ್ದ ಪರಿಣಾಮ ಭಾರತೀಯ ವಲಸಿಗರು ಸೇರಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗಡಿ ಪಟ್ಟಣವಾದ ಟಿಜುವಾನಾಗೆ ಹೋಗುವ ಮಾರ್ಗದಲ್ಲಿ ಅವಘಡ ಸಂಭವಿಸಿದ್ದು, ಬಸ್‌ನಲ್ಲಿ ಭಾರತ, ಡೊಮಿನಿಕನ್ ರಿಪಬ್ಲಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ನಾಗರಿಕರು ಸೇರಿದಂತೆ ಸುಮಾರು 42 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ.
ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ ಎಂದು ನಯರಿತ್ ರಾಜ್ಯದ ನಾಗರಿಕ ರಕ್ಷಣಾ ಸಂಸ್ಥೆ ವರದಿ ಮಾಡಿದೆ.
ಅತೀ ವೇಗದ ಚಾಲನೆಯಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಯಗೊಂಡ ಸುಮಾರು ಇಪ್ಪತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅಲ್ಲದೆ ಮೃತರ ವಿವರ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಬಸ್ ಸುಮಾರು 130 ಅಡಿಗಳಷ್ಟು ಆಳದ ಕಂದಕಕ್ಕೆ ಬಿದ್ದಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ನಯಾರಿಟ್‌ನ ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರೋಡ್ರಿಗಸ್ ಹೇಳಿದ್ದಾರೆ.