ಕೊಡವರು ಹಾಕಿ ಕ್ರೀಡೆಯನ್ನು ನಿರ್ಲಕ್ಷಿಸಬಾರದು- ವಿ. ಬಾಡಗ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಪಾಂಡಂಡ ಬೋಪಣ್ಣ ನುಡಿ

ಗೋಣಿಕೊಪ್ಪ, ನ.28: ರಾಷ್ಟ್ರೀಯ ಹಾಕಿ ತಂಡಗಳಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಹಾಕಿ ಕ್ರೀಡೆಯ ತವರಾದ ಕೊಡಗಿನ ಹೆಗ್ಗಳಿಕೆಗೆ ಹಿನ್ನೆಡೆಯಾಗುತ್ತದೆ. ಆದ್ದರಿಂದ ಕೊಡವರು ಯಾವುದೇ ಕಾರಣಕ್ಕೂ ಹಾಕಿ ಕ್ರೀಡೆಯನ್ನು ನಿರ್ಲಕ್ಷಿಸಬಾರದು ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಕೆ.ಬೋಪಣ್ಣ ಕರೆ ನೀಡಿದ್ದಾರೆ.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ‘ಹೈ ಪ್ಲೈಯರ್ಸ್ ಕಪ್-2023’ಅನ್ನು ಮಂಗಳವಾರದಂದು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಹಾಕಿ ಕ್ರೀಡೆಯ ಬಗ್ಗೆ ಕೊಡವರು ಆಸಕ್ತಿ ವಹಿಸದಿದ್ದಲ್ಲಿ ಅದಕ್ಕೆ ಭವಿಷ್ಯವಿಲ್ಲ.

ಕೊಡವರ ಹೆಗ್ಗಳಿಕೆಗಳಿಗೆ ಒಂದು ಗರಿ ಮೂಡಿಸುವಲ್ಲಿ ಹಾಕಿ ಕ್ರೀಡೆಯ ಪಾತ್ರವೂ ಬಹಳಷ್ಟಿದೆ. ಆದ್ದರಿಂದ ಕೊಡಗಿನ ನೈಜ ಹಾಕಿ ಆಟಗಾರರನ್ನು ರೂಪಿಸಲು ಕೆಳ ಮಟ್ಟದ ಶ್ರಮ ತೀರಾ ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ದೇಶದ ಹಾಕಿ ಕ್ರೀಡೆಗೆ ಕೊಡಗಿನ ಕೊಡುಗೆ ಅಪಾರವಾದದ್ದು. ಕೊಡಗನ್ನು ಹೊರತುಪಡಿಸಿ ಹಾಕಿಯ ಇತಿಹಾಸ ಬರೆಯಲು ಸಾಧ್ಯವಿಲ್ಲ. ಕೊಡಗಿನಲ್ಲಿ ಹಾಕಿ ಕ್ರೀಡೆ ಆಳವಾಗಿ ಬೇರೂರುವಲ್ಲಿ ಹಿಂದಿನಿಂದಲೂ ಗ್ರಾಮೀಣ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ ಬೋಪಣ್ಣ ಅವರು, ಹಾಕಿ ಕ್ರೀಡೆಯ ಅಸ್ತಿತ್ವವನ್ನು ಕಾಪಾಡಲು ಪ್ರತಿಯೊಬ್ಬ ಕೊಡವನ ಸಹಕಾರ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸಿಎನ್‌ಸಿ ಅಧ್ಯಕ್ಷರಾದ ನಂದಿನೆರವಂಡ ಯು. ನಾಚಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಕೊಡವರ ಕೊಡುಗೆ ವರ್ಣಿಸಲು ಅಸಾಧ್ಯ. ಸರಕಾರದ ಯಾವುದೇ ಅನುದಾನದ ನೆರವಿಲ್ಲದೆ 1997ರಲ್ಲಿ ತಮ್ಮ ವಿಭಿನ್ನ ಚಿಂತನೆಯ ಮೂಲಕ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಪ್ರಾರಂಭಿಸಿದ ಪಾಂಡಂಡ ಕುಟ್ಟಪ್ಪ ಅವರು ಕೊಡಗಿನ ಹಾಕಿ ಕ್ರೀಡೆಗೆ ಹೊಸ ಆಯಾಮ ನೀಡಿದವರಾಗಿದ್ದಾರೆ. ಕೊಡವರಿಗೆ ರಕ್ತಗತವಾಗಿ ಬಂದಿರುವ ಹಾಕಿ ಕ್ರೀಡೆಯ ಮೇಲಿನ ಅಭಿಮಾನವೇ ಕುಟ್ಟಪ್ಪ ಅವರಿಗೆ ಕೊಡವ ಹಾಕಿ ಉತ್ಸವವನ್ನು ಪ್ರಾರಂಭಿಸಲು ಸ್ಪೂರ್ತಿಯಾಯಿತು ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಅಂತರಾಷ್ಟ್ರೀಯ ಖ್ಯಾತಿಯ ಅಥ್ಲೆಟಿಕ್ ತಾರೆ ಮತ್ತು ಏಕಲವ್ಯ ಪ್ರಶಸ್ತಿ ವಿಜೇತರಾದ ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿ, ಇಡೀ ಭಾರತ ಹಾಕಿ ತಂಡವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿರುವ ಕೊಡವ ಹಾಕಿ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೆಲವೊಂದು ಕಾರಣಗಳಿಂದ ಪರಿಣಿತ ಆಟಗಾರರಿಗೂ ಭಾರತ ತಂಡದಲ್ಲಿ ಅವಕಾಶ ದೊರೆಯುತ್ತಿಲ್ಲ. ಯಾವುದೇ ಅಡೆತಡೆಗಳಿದ್ದರೂ ಅವುಗಳೆಲ್ಲವನ್ನು ಮೆಟ್ಟಿನಿಂತು ಕೊಡಗಿನ ಆಟಗಾರರು ಭಾರತದ ಹಾಕಿ ತಂಡದಲ್ಲಿ ಸ್ಥಾನ ಪಡೆದು ದೇಶವನ್ನು ಪ್ರತಿನಿಧಿಸುವ ಕಾಲ ಮತ್ತೆ ಮರುಕಳಿಸಲಿದೆ. ಈ ಕುರಿತು ಎಲ್ಲರೂ ಆಶಾವಾದಿಗಳಾಗಿರಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಹೈ ಪ್ಲೈಯರ್ಸ್ ಕಪ್-2023ರ ವಿಜೇತರಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ಅರ್ಜುನ್ ದೇವಯ್ಯ ವೇದಿಕೆಯಲ್ಲಿ ಅನಾವರಣಗೊಳಿಸಿದರು. ಎನ್. ಯು. ನಾಚಪ್ಪ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷರಾದ ಪಳಂಗಂಡ ಲವಕುಮಾರ್, ಕಾಫಿ ಬೆಳಗಾರರಾದ ಕೊಲ್ಲಿರ ಬೋಪಣ್ಣ, ಸ್ಥಳಿಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ವಿ. ಬಾಡಗ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ. ಸಿ. ಗೀತಾಂಜಲಿ, ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ಉದ್ಯೋನ್ಮುಖ ಗಾಯಕರಾದ ವಿರಾಜಪೇಟೆಯ ಮಾಳೇಟಿರ ಅಜಿತ್ ಪೂವಣ್ಣ ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಅಮ್ಮಣಿಚಂಡ ರೋಹಿತ್ ವಂದಿಸಿದರು.

Latest Indian news

Popular Stories