ತಲಕಾವೇರಿ ಪುಣ್ಯಕ್ಷೇತ್ರದ ಬಳಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಗೊಳಿಸುವಂತೆ ಕೊಡಗು ಏಕೀಕರಣ ರಂಗ ಆಗ್ರಹ

ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಕಾವೇರಿ ಪುಣ್ಯಕ್ಷೇತ್ರದ ಸಮೀಪ ಪ್ರವಾಸಿಗರನ್ನು ಸೆಳೆಯಲು ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೋರಿ ಕೊಡಗು ಏಕೀಕರಣ ರಂಗದಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಭಾಗಮಂಡಲ ಗ್ರಾಮ ಪಂಚಾಯಿತಿ ಭಾಗಮಂಡಲ-ತಲಕಾವೇರಿ ನಡುವೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಎರಡು ಗ್ಲಾಸ್ ಬ್ರಿಡ್ಜ್ ನಿಮಿರ್ಸಲು ಉದ್ಯಮಿಗಳಿಗೆ ಅನುಮತಿ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಏಕೀಕರಣ ರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

2020ರ ಆಗಸ್ಟ್ ತಿಂಗಳಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರ ಜೀವಹಾನಿಯಾಗಿದೆ. ಈ ಬಗ್ಗೆ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಈ ಭೂಕುಸಿತಕ್ಕೆ ತಲಕಾವೇರಿಯ ಪರ್ವತ ಸಾಲುಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ನಡೆಸಿದ ಭೂ ಅಭಿವೃದ್ಧಿ ಕಾಮಗಾರಿಯೇ ಕಾರಣ ಎಂಬುದು ದೃಢ ಪಟ್ಟಿದೆ.

ತಲಕಾವೇರಿ ಜಿಲ್ಲೆಯ ಜನರ ಶ್ರದ್ಧಾಭಕ್ತಿಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಪ್ರಚಾರ ಮಾಡಿದ ಎಡವಟ್ಟಿನಿಂದಾಗಿ ಈ ಕ್ಷೇತ್ರ ಕೂಡ ಪ್ರವಾಸಿಗರ ಅಂಧಾದುಂಧಿನ ವರ್ತನೆಗೆ ಸಾಕ್ಷಿಯಾಗಿದೆ. ಈ ಕ್ಷೇತ್ರದ ಸಮೀಪವೇ ಮತ್ತೊಂದು ಪುವಾಸಿ ಆಕರ್ಷಣೆ ರೂಪುಗೊಂಡಲ್ಲಿ ತಲಕಾವೇರಿಗೆ ಭಕ್ತಾಧಿಗಳಿಗಿಂತ ಪ್ರವಾಸಿಗರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಅಪಾಯವಿದೆ.

1986ರ ಎನ್ವಿರಾನಮೆಂಟ್ ಪ್ರೊಟೆಕ್ಷನ್ ಆ್ಯಕ್ಟ್ ಪ್ರಕಾರ ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮೇ. 15,2017ರಂದು ಘೋಷಿಸಿದೆ. ಈ ಘೋಷಣೆಯಂತೆ ರಾಜ್ಯ ಸರಕಾರ ಜೋನಲ್ ಪ್ಲಾನ್ ರೂಪಿಸಬೇಕಿದೆ. ಆದರೆ ರಾಜ್ಯ ಸರಕಾರ ಇದುವರೆಗೂ ಆ ರೀತಿಯ ಘೋಷಣೆ ಹೊರಡಿಸಿಲ್ಲ.

ಮಡಿಕೇರಿ ಸಮೀಪದ ಉಡೋತ್ನಲ್ಲಿ ಈಗಾಗಲೇ ನಿರ್ಮಿಸಿರುವ ಗ್ಲಾಸ್ ಬ್ರಿಡ್ಜ್ನಿಂದ ಸ್ಥಳೀಯರಿಗೆ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವಾಗಲಿ ಯಾವ ಪರಿಹಾರೋಪಾಯವನ್ನು ಕೈಗೊಂಡಿಲ್ಲ. ಇದೀಗ ಭಾಗಮಂಡಲದಲ್ಲಿ ಅನುಮತಿಸಲಾದ ಗ್ಲಾಸ್ ಬ್ರಿಡ್ಜ್ ಕೂಡ ಅದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡಲಿದೆ. ಈ ಹಿನ್ನೆಲೆಯಲ್ಲಿ ಭಾಗಮಂಡಲ ಗ್ರಾಮ ಪಂಚಾಯಿತಿ ತಲಕಾವೇರಿ ಪುಣ್ಯ ಕ್ಷೇತ್ರದ ಸಮೀಪ ಪ್ರವಾಸಿಗರನ್ನು ಸೆಳೆಯಲು ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿಗಳಿಗೆ ಕೊಡಗು ಏಕೀಕರಣ ರಂಗ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.

Latest Indian news

Popular Stories