
ಕೊಡಗು | ಕಾಣೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ | ಮೃತದೇಹ ದರ್ಶನಕ್ಕೆ ಬಂದ ಸಂಬಂಧಿಯ ಕಾರು ಅಪಘಾತ, ಮೃತ್ಯು
ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್ ನಿವಾಸಿ ಪೌಲ್ ಡಿಸೋಜ ಎಂಬುವವರ ಮೃತದೇಹ ಇಂದು ಬೆಳಗ್ಗೆ ಅಲ್ಲಿನ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ನಾಲ್ಕು ದಿವಸಗಳ ಹಿಂದೆ ಮನೆಯಿಂದ ಕಾಣೆಯಾಗಿ ಎಲ್ಲಿಯೂ ಕಂಡುಬಾರದ ಹಿನ್ನೆಲೆ ಮನೆಯವರು ಪೊಲೀಸ್ ಪುಕಾರು ದಾಖಲಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ಇಂದು ಕೆರೆಯಲ್ಲಿ ಪತ್ತೆಯಾದ ಪೌಲ್ ಡಿಸೋಜರವರ ದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದೆ. ಹೀಗಾಗಿ ಇವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದಾತ ವಾಹನ ಅಪಘಾತಕ್ಕೆ ಬಲಿ:
ಇದೇ ಸಂಧರ್ಭದಲ್ಲಿ ಮೃತಪಟ್ಟ ಸಂಬಂಧಿಯ ಅಂತಿಮದರ್ಶನಕ್ಕೆಂದು ಬರುತ್ತಿದ್ದ ಕಾರು ಅಪಘಾತಕ್ಕಿಡಾಗಿ ಓರ್ವ ಸಾವನಪ್ಪಿ ನಾಲ್ವರು ಗಾಯಗೊಂಡಿರುವ ದಾರುಣ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಕಳೆದ ಬಾನುವಾರ ಕಾಣೆಯಾಗಿದ್ದ ಸುಂಟಿಕೊಪ್ಪ ಸಮೀಪದ ಸೆವೆಂತ್
ಮೇಲ್ ನಿವಾಸಿ ಪೌಲ್ ಡಿಸೋಜ ಅವರ ಮೃತ ದೇಹ ಇಂದು ಬೆಳಗ್ಗೆ ಕೆರೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆದು ಅಂತ್ಯ ಸಂಸ್ಕಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಇವರ ಅಣ್ಣನ ಮಕ್ಕಳು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ದುರಾದೃಷ್ಟಕ್ಕೆ ಇವರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ಬಳಿಯ ಬಿಡದಿಯಲ್ಲಿ ಡಿವೈಡರ್ ಗೆ ಅಪ್ಪಳಿಸಿ ಮಗುಚಿಕೊಂಡಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿ ಪೌಲ್ ಡಿಸೋಜರವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ ಅವರು ಕೊನೆಯುಸಿರು ಎಳೆದಿದ್ದಾರೆ. ಇನ್ನುಳಿದವರಾದ ಪ್ರವೀಣ್ ಡಿಸೋಜ, ವನಿಷಾ ಡಿಸೋಜ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡು ಅಲ್ಲಿನ ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ಪೌಲ್ ಡಿಸೋಜ ಅವರ ಅಕಾಲಿಕ ಸಾವಿನಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದಾರೆ ಇನ್ನೊಂದೆಡೆ ಅದೇ ಕುಟುಂಬದ ಇನ್ನೋರ್ವ ವಾಹನ ಅಪಘಾತದಲ್ಲಿ ಸಾವಿಗೀಡಾಗಿರುವುದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಶಾಪ ಹಾಕುವತಾಗಿದೆ.




