ಕೊಡಗು: ಇಂದಿನ ಪ್ರಮುಖ ಸುದ್ದಿಗಳು


ಕೊಡಗು: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಮತ ಎಣಿಕೆ ಜೂನ್, 04 ರಂದು ನಡೆಯಲಿದ್ದು, ಈ ದಿನದಂದು ಕೊಡಗು ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ಮತ್ತು 144(ಎ) ಹಾಗೂ ಕರ್ನಾಟಕ ಪೊಲೀಸ್ ಆಕ್ಟ್ 1963 ರ ಕಲಂ 35 ರಡಿ ದತ್ತವಾದ ಅಧಿಕಾರದಂತೆ ಜೂನ್, 04 ರಂದು ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಪ್ರತಿಭಟನೆ, ಖಾಸಗಿ ವ್ಯಕ್ತಿಗಳು ಧ್ವನಿವರ್ಧಕ ಬಳಸುವುದು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಬಿರುಸಿನ ಮತದಾನ


ಕರ್ನಾಟಕ ವಿಧಾನ ಪರಿಷತ್‍ನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಬಿರುಸಿನಿಂದ ನಡೆಯಿತು.
ಬೆಳಗ್ಗೆ 10 ಗಂಟೆ ವೇಳೆಗೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮತದಾನವು ಶೇ.22.69 ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.20.08 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 12 ಗಂಟೆ ವೇಳೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನವು ಶೇ.47.28 ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.42.85 ರಷ್ಟು ಮತದಾನವಾಗಿತ್ತು.


ಮಧ್ಯಾಹ್ನ 2 ಗಂಟೆ ವೇಳೆಗೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.66.41 ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.62.42 ರಷ್ಟು ಮತದಾನ ಆಗಿತ್ತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ನಗರಸಭೆಯ ಕೌನ್ಸಿಲ್ ಸಭಾಂಗಣದ ಮತಗಟ್ಟೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಹಕ್ಕು ಚಲಾಯಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆಯಲ್ಲಿ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರ ಸಂಬಂಧ ಬಿರುಸಿನ ಮತದಾನ ನಡೆದಿದೆ ಎಂದು ಹೇಳಿದರು.


ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರು ಉತ್ಸಾಹದಿಂದ ಮತದಾನ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಅಗತ್ಯ ಮುನ್ನಚರಿಕೆ ಜಿಲ್ಲೆಗೆ ಎನ್‍ಡಿಆರ್‍ಎಫ್ ತಂಡ ಭೇಟಿ; ಚರ್ಚೆ


:-ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವ ಸಂಬಂಧ ಈಗಾಗಲೇ ಆಗಮಿಸಿರುವ ಎನ್‍ಡಿಆರ್‍ಎಫ್ ತಂಡವು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸೋಮವಾರ ಭೇಟಿ ಮಾಡಿ ಮಳೆಗಾಲದಲ್ಲಿ ಅನುಸರಿಸಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಿದರು. ಎನ್‍ಡಿಆರ್‍ಎಫ್‍ನ ಅಜಯ್ ಕುಮಾರ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಮಳೆ ಸಂಬಂಧ ಹವಾಮಾನ ಇಲಾಖೆಯಿಂದ ಕಾಲಕಾಲಕ್ಕೆ ಬಿಡುಗಡೆ ಆಗುವ ಮಾಹಿತಿಯನ್ನು ಅಪ್‍ಡೇಟ್ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರವಹಿಸಿ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.


ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ, ಎನ್‍ಡಿಆರ್‍ಎಫ್ ತಂಡ ಪ್ರಮುಖರು ಇದ್ದರು. ಎನ್‍ಡಿಆರ್‍ಎಫ್ ತಂಡವು ಬೆಂಗಳೂರಿನ ಆರ್‍ಆರ್‍ಸಿ ವಿಭಾಗದಿಂದ ಆಗಮಿಸಿದೆ.

Latest Indian news

Popular Stories