ಎಲ್ಲಾ ಶ್ರಮಿಕ ವರ್ಗಕ್ಕೂ ಸರ್ಕಾರ ನೆರವು ಘೋಷಿಸಲಿ : ಹರೀಶ್ ಜಿ.ಆಚಾರ್ಯ ಒತ್ತಾಯ

ಮಡಿಕೇರಿ ಜೂ.೪ : ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ ಕೋವಿಡ್ ಪರಿಹಾರದ ಪ್ಯಾಕೇಜ್ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿರುವ ಪ್ಯೂಪಲ್ ಮೂವ್‌ಮೆಂಟ್ಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು, ಎಲ್ಲಾ ಶ್ರಮಿಕ ವರ್ಗಕ್ಕೆ ಸಮಾನ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೈಜ ಫಲಾನುಭವಿಗಳಿಗೆ ಸರ್ಕಾರ ಪ್ಯಾಕೇಜ್ ಬಿಡುಗಡೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಚಲನಚಿತ್ರ ರಂಗ, ಕಿರುತೆರೆ ಸೇರಿದಂತೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪರಿಹಾರ ನೀಡುವುದಾಗಿ ತಿಳಿಸಿರುವ ಸರ್ಕಾರ ಯಾರಿಂದಲೂ ನೆರವು ದೊರೆಯದ ವರ್ಗವನ್ನು ಕಡೆಗಣ ಸಿದೆ ಎಂದು ಟೀಕಿಸಿದ್ದಾರೆ.
ಚಿತ್ರರಂಗದಲ್ಲಿ ದುಡಿಯುತ್ತಿರುವವರಿಗೆ ನೆರವು ನೀಡಲು ನಾಯಕ ನಟರು ಸೇರಿದಂತೆ ಅನೇಕರು ಮುಂದೆ ಬರುತ್ತಾರೆ. ಆದರೆ ಮನೆ ಕೆಲಸ, ಚಿನ್ನದ ಕೆಲಸ, ಮರದ ಕೆಲಸ, ಕರಕುಶಲ ಕರ್ಮಿಗಳು, ಹೊಟೇಲ್‌ಗಳಲ್ಲಿ ದುಡಿಯುವ ಶ್ರಮಿಕ ವರ್ಗ, ರಸ್ತೆಬದಿ ವ್ಯಾಪಾರಿಗಳು, ಶುಭ, ಅಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡುವವರು, ಗೃಹೋಪಯೋಗಿ ವಸ್ತುಗಳ ತಯಾರಕರು, ಖಾಸಗಿ ಬಸ್ ಗಳಲ್ಲಿ ದುಡಿಯುವ ಕಾರ್ಮಿಕರು, ವರ್ಕ್ಶಾಪ್ ಕೆಲಸಗಾರರು, ಬಟ್ಟೆ ಸ್ವಚ್ಛ ಮಾಡುವವರು ಸೇರಿದಂತೆ ಇನ್ನೂ ಅನೇಕರಿಗೆ ಯಾರು ನೆರವು ನೀಡಲು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಸರ್ಕಾರ ಪ್ಯಾಕೇಜ್ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಶ್ರಮಿಕ ವರ್ಗದ ನೈಜ ಫಲಾನುಭವಿಗಳಿಗೆ ಸಮಾನ ರೀತಿಯ ಪರಿಹಾರವನ್ನು ಘೋಷಿಸಬೇಕೆಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.

Latest Indian news

Popular Stories