ನಾವು ಯಾರಿಗೇನು ಕಡಿಮೆ ಇಲ್ಲ : ಕಾಡಾನೆಗಳು ದಾಟಿದ್ದೇ ದಾರಿ

ಮಡಿಕೇರಿ ಮೇ ೨೫ : ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ, ಇವುಗಳು ದಾಟಿದ್ದೇ ದಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆಲ್ಯಹುದಿಕೇರಿ, ಬರಡಿ, ವಾಲ್ನೂರು, ತ್ಯಾಗತ್ತೂರು ಭಾಗದಲ್ಲಿ ಸುಮಾರು ೯ ಕಿ.ಮೀ ದೂರ ರೈಲ್ವೆ ಕಂಬಿಗಳಿAದ ತಡೆಬೇಲಿ ನಿರ್ಮಿಸಿ ಕಾಡಾನೆಗಳು ಗ್ರಾಮಗಳಿಗೆ ಲಗ್ಗೆ ಇಡಬಾರದೆಂದು ಕ್ರಮ ಕೈಗೊಳ್ಳಲಾಗಿದೆ. ಆದರೆ ಕಾಡಾನೆಗಳ ಹಿಂಡು ಈ ಬೇಲಿಗೆ ಬೆದರದೆ ಹಿಂಡು ಹಿಂಡಾಗಿ ದಾಳಿ ಇಡುತ್ತಿವೆ. ಅತಿ ಸುಲಭವಾಗಿ ಮನುಷ್ಯರಂತೆ ಬೇಲಿಯನ್ನು ದಾಟುತ್ತಿರುವ ಕಾಡಾನೆಗಳು ತೋಟಗಳನ್ನು ನಾಶ ಮಾಡುತ್ತಿವೆ. ಮಾಲೀಕರು ಹಾಗೂ ಕಾರ್ಮಿಕರಲ್ಲಿ ಜೀವಭಯವನ್ನು ಉಂಟು ಮಾಡುತ್ತಿವೆ.
ಕಾವೇರಿ ನದಿಯ ಮೂಲಕ ಈಜಿ ಬಂದು ತಡೆ ಬೇಲಿಯನ್ನು ದಾಟುತ್ತಿವೆ. ತ್ಯಾಗತ್ತೂರು ಭಾಗದ ಮುಂಡ್ರಮನೆ ಕುಟುಂಬಸ್ಥರು ಹಾಗೂ ಸುತ್ತಮುತ್ತಲ ನಿವಾಸಿಗಳ ಗದ್ದೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದು, ಈ ಬಾರಿಯೂ ಬೆಳೆ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬೆಳೆ ಬೆಳೆದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ಕಾಡಾನೆಗಳು ತಿಂದು ತೇಗುತ್ತವೆ.
ರೈಲ್ವೆ ಕಂಬಿಗಳ ತಡೆಬೇಲಿ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ, ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದ್ದರೂ ಕಳಪೆ ಕಾಮಗಾರಿ ನಡೆಸಲಾಗಿದೆ. ಇದೇ ಕಾರಣಕ್ಕೆ ಆನೆಗಳ ದಾಳಿಯಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೃಷಿ ಫಸಲು, ತೋಟಗಳಿಗೆ ಹಾನಿಯಾಗುತ್ತಿರುವುದಲ್ಲದೆ ಜೀವಗಳು ಕೂಡ ಬಲಿಯಾಗುತ್ತಿದ್ದು, ಶಾಶ್ವತ ಪರಿಹಾರವನ್ನು ಸೂಚಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ ಎಂದು ಸ್ಥಳೀಯರು ಟೀಕಿಸಿದ್ದಾರೆ.
ತಕ್ಷಣ ವೈಜ್ಞಾನಿಕ ರೂಪದಲ್ಲಿ ತಡೆಬೇಲಿಯ ಗುಣಮಟ್ಟವನ್ನು ಹೆಚ್ಚಿಸಬೇಕು ಮತ್ತು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಫೊಟೋ :: ಎಲಿಫೆಂಟ್

Latest Indian news

Popular Stories