ವಿರಾಜಪೇಟೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ : ಭರದಿಂದ ಸಾಗಿದೆ ಕಾಮಗಾರಿ

ಮಡಿಕೇರಿ ಜೂ.೪ : ವಿರಾಜಪೇಟೆಯ ಸರಕಾರಿ ಆಸ್ಪತ್ರೆ ಮೊಟ್ಟ ಮೊದಲ ಬಾರಿಗೆ ಆಕ್ಸಿಜನ್ ಉತ್ಪಾದನಾ(ಆಕ್ಸಿಜನ್ ಕನ್ವರ್ಟರ್) ಘಟಕವನ್ನು ಹೊಂದುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಸುಮಾರು ೧.೫೦ ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಅಳವಡಿಸಲಾಗುತ್ತಿದೆ. ಏಕಕಾಲದಲ್ಲಿ ೧೦೦ ಮಂದಿಗೆ ಸಿಲಿಂಡರ್ ಇಲ್ಲದೆಯೇ ಆಕ್ಸಿಜನ್ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಲಭ್ಯವಾಗಲಿದೆ.
ಈ ಯಂತ್ರವನ್ನು ದೆಹಲಿಯ ಘಾಝಿಯಾಬಾದ್‌ನಿಂದ ವಿರಾಜಪೇಟೆಗೆ ತರಲಾಗಿದ್ದು, ಈ ಯಂತ್ರ ಗಾಳಿಯನ್ನು ಹೀರಿಕೊಂಡು ಆಕ್ಸಿಜನ್ ಅನ್ನು ತಯಾರಿ ಮಾಡುವ ಸಾಮರ್ಥ್ಯ ಹೊಂದಿದೆ. ಕೋವಿಡ್ ಸಂದರ್ಭ ಮಾತ್ರವಲ್ಲದೇ, ಇತರ ಕಾಲದಲ್ಲೂ ಕೂಡ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಕೆಗೂ ಇದು ಸಹಕಾರಿಯಾಗಿದೆ.
ಈ ಆಕ್ಸಿಜನ್ ಉತ್ಪಾದನಾ ಯಂತ್ರಕ್ಕೆ ನಿರಂತರ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಲು ಬೃಹತ್ ಗಾತ್ರದ ಜನರೇಟರ್ ಅನ್ನು ಕೂಡ ಅಳವಡಿಸಲಾಗುತ್ತಿದೆ. ಮಾತ್ರವಲ್ಲದೇ ದಿನದ ೨೪ ಗಂಟೆ ವಿದ್ಯುತ್ ಪೂರೈಕೆಗಾಗಿ ಹೊಸ ಹೈಪರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ನಡೆಯುತ್ತಿದೆ. ಈ ಯಂತ್ರವನ್ನು ಮಳೆ, ಗಾಳಿಯಿಂದ ರಕ್ಷಿಸಲು ಶೆಡ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ.
== ಆಕ್ಸಿಜನ್ ಯಂತ್ರ ಕೋವಿಡ್ ಕಾಲದಲ್ಲಿ ಮಾತ್ರವಲ್ಲದೇ ಇತರ ಅವಧಿಯಲ್ಲೂ ಬಳಕೆಗೆ ಬರಲಿದೆ. ೧೦೦ ಮಂದಿಗೆ ಆಕ್ಸಿಜನ್ ಪೂರೈಸಲು ಇದರಿಂದ ಸಾಧ್ಯವಾಗಲಿದೆ. ದೆಹಲಿಯ ಘಾಜಿಯಾಬಾದ್‌ನಿಂದ ಯಂತ್ರ ತರಲಾಗಿದ್ದು, ಸರಕಾರಿ ಆಸ್ಪತ್ರೆ ಆಕ್ಸಿಜನ್ ಉತ್ಪಾದಕ ಘಟಕ ಹೊಂದಿರುವುದು ರಾಜ್ಯದಲ್ಲಿಯೇ ವಿರಾಜಪೇಟೆ ಆಸ್ಪತ್ರೆ ಮಾತ್ರವೇ ಆಗಿದೆ. ಇನ್ನು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇರಬಹುದು.
ಕೆ.ಜಿ.ಬೋಪಯ್ಯ
ಶಾಸಕರು ವಿರಾಜಪೇಟೆ (ಫೋಟೋ :: ಆಕ್ಸಿಜನ್ ಹಾಸ್ಪಿಟಲ್)

Latest Indian news

Popular Stories