ಟೈಲರಿಂಗ್ ಅಂಗಡಿಗೆ ಬೆಂಕಿ: ಉಸಿರುಗಟ್ಟಿ 7 ಮಂದಿ ಸಾವು

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಛತ್ರಪತಿ ಸಂಭಾಜಿನಗರದಲ್ಲಿ ಇಂದು ಮುಂಜಾನೆ ಟೈಲರಿಂಗ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಕಂಟೋನ್ಮೆಂಟ್ ಪ್ರದೇಶದ ಡಾನಾ ಬಜಾರ್‍ನಲ್ಲಿರುವ ಅಂಗಡಿಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೈಲರಿಂಗ್ ಅಂಗಡಿ ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಕಟ್ಟಡದ ನೆಲ ಮಹಡಿಯಲ್ಲಿದ್ದು, ಜನರು ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಬೆಳಿಗ್ಗೆ 4 ಗಂಟೆ ಸುಮಾರಿಗೆ ಅಂಗಡಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಘಟನೆಯ ಬಗ್ಗೆ 4.15 ಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬೆಂಕಿಯಿಂದಾಗಿ ಅಂಗಡಿಯ ಮೇಲೆ ಮೊದಲ ಮಹಡಿಯಲ್ಲಿ ಇದ್ದ ಕೊಟ್ಟಡಿಗಳಲ್ಲಿದ್ದ ಕುಟುಂಬವೊಂದು ದಟ್ಟ ಹೊಗೆಯಿಂದ ಉಸಿರುಗಟ್ಟಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ಸುದ್ದಿಗಾರರಿಗೆ ತಿಳಿಸಿದರು.

ಮೃತರನ್ನು ಅಸೀಮ್ ಶೇಖ್ (3), ಪಾರಿ ಶೇಖ್ (2), ವಾಸಿಂ ಶೇಖ್ (30), ತನ್ವೀರ್ ಶೇಖ್ (23), ಹಮೀದಾ ಬೇಗಂ (50), ಶೇಖ್ ಸೊಹೈಲ್ (35) ಮತ್ತು ರೇಷ್ಮಾ ಶೇಖ್ (22) ಎಂದು ಗುರುತಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Latest Indian news

Popular Stories