ಮೈಸೂರು: ಪರ, ವಿರೋಧದ ನಡುವೆ ನಾಳೆ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ!

ಮೈಸೂರು: ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಕೇವಲ ಮೂರು ದಿನಗಳು ಬಾಕಿಯಿರುವಂತೆಯೇ ಮೈಸೂರಿನಲ್ಲಿ ನಾಳೆ ಆಯೋಜಿಸಲಾಗಿರುವ ಮಹಿಷಾ ದಸರಾ ಆಚರಣೆ ಪರ ಹಾಗೂ ವಿರೋಧದ ನಡುವೆ ಷರತ್ತುಬದ್ಧ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಮಹಿಷಾ ದಸರಾ ಸಮಿತಿ ಉದ್ದೇಶಿಸಿತ್ತು. ಇದಕ್ಕೆ ವಿರುದ್ಧವಾಗಿ ಚಾಮುಂಡಿ ಬೆಟ್ಟ ಚಲೋ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಇವರೆಡಕ್ಕೂ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಬದಲಿಗೆ ನಗರದ ಟೌನ್ ಹಾಲ್ ನಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡಲಾಗಿದ್ದು ವೇದಿಕೆ ಕಾರ್ಯಕ್ರಮಕ್ಕಷ್ಟೇ ಅನುಮತಿ ನೀಡಲಾಗಿದ್ದು ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮೆರವಣಿಗೆ, ಸಮಾವೇಶ, ರ್ಯಾಲಿ, ಪ್ರತಿಭಟನೆ ಮಾಡಬಾರದು. ನೇರವಾಗಿ ಸಭಾ ಕಾರ್ಯಕ್ರಮ ಆರಂಭಿಸಬೇಕು ಪ್ರಚೋದನೆ ನೀಡುವ ಭಾಷಣ ಮಾಡಬಾರದು ಎಂದು ಷರತ್ತುಗಳೊಂದಿಗೆ ಅನುಮತಿ ನೀಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಟೌನ್ ಹಾಲ್ ಹೊರತುಪಡಿಸಿ ಮೈಸೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ಅಕ್ಟೋಬರ್ 14ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಯಾವುದೇ ಮೆರವಣಿಗೆ ಪ್ರತಿಭಟನೆ ಮಾಡುವಂತಿಲ್ಲ. ಮದುವೆ ಶಾಲಾಕಾಲೇಜಿಗೆ ತೆರಳುವವರಿಗೆ ಅನ್ವಯವಿಲ್ಲ ಎಂದು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಆದೇಶವನ್ನು ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಬಂದು ಸ್ವಾಗತ ಕೋರಿದ್ದಾರೆ. ಒಂದು ವೇಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ನಡೆದರೆ, ಅಕ್ಟೋಬರ್ 15 ರಂದು ನಡೆಯುವ ನಾಡಹಬ್ಬ ಉದ್ಘಾಟನಾ ವೇದಿಕೆಯಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಮಹಿಷಾ ದಸರಾ ಆಚರಣೆ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್, ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಈ ಹಿನ್ನೆಲೆಯಲ್ಲಿ ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡುವುದಿಲ್ಲ, ಬದಲಾಗಿ ಮೈಸೂರು ನಗರದ ಟೌನ್ ಹಾಲ್ ನಲ್ಲಿ ಸಭೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿದ್ದು, ಅಲ್ಲಿಯೇ ಮಹಿಷಾ ದಸರಾ ಆಚರಣೆ ಮಾಡುತ್ತೇವೆ ಎಂದು ಸ್ಪಷ್ಪಪಡಿಸಿದರು.

Latest Indian news

Popular Stories