ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಹಾಗೂ ಚಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಿಜಯಪುರ-ಗುಹಾಗರ್ ರಸ್ತೆಯ ಜಾತ್ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಕುಟುಂಬವು ವಿಜಯಪುರದಿಂದ ಜಾತ್‌ಗೆ ಪ್ರಯಾಣಿಸುತ್ತಿತ್ತು. ಕಾರು ಅಮೃತವಾಡಿ ಫಾಟಾ ತಲುಪಿದಾಗ, ವೇಗವಾಗಿ ಬಂದ ಮಣ್ಣು ತುಂಬಿದ ಟ್ರಕ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರೆಲ್ಲರೂ ಜಾತ್ ಪಟ್ಟಣದವರಾಗಿದ್ದು, ಯಾತ್ರೆಗೆ ಹೊರಟಿದ್ದರು ಎಂದು ಅವರು ಹೇಳಿದ್ದಾರೆ.
ಮೃತರನ್ನು ಮಯೂರಿ ಸಾವಂತ್(38), ಅವರ ಎಂಟು ವರ್ಷದ ಮಗ ಶ್ಲೋಕ್, ತಂದೆ ನಾಮದೇವ್(65) ಮತ್ತು ತಾಯಿ ಪದ್ಮಿನಿ(60) ಮತ್ತು ಚಾಲಕ ದತ್ತ ಚವಾಣ್(40) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.