ಸನಾತನ ಧರ್ಮದ ಕುರಿತು ಹೇಳಿಕೆ: ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಸನಾತನ ಧರ್ಮದ ನಿರ್ಮೂಲನೆ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿಮಾಡಿದೆ.

ಸನಾತನ ಧರ್ಮದ ಕುರಿತು ಈ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ಮಾಜಿ ಸಂಸದ ಎ ರಾಜಾ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಸನಾತನ ಧರ್ಮದ ಹೇಳಿಕೆ ವಿಚಾರವಾಗಿ ಚೆನ್ನೈನ ವಕೀಲರೊಬ್ಬರು ಉದಯನಿಧಿ ಮತ್ತು ರಾಜಾ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಇದೇ ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಉದಯನಿಧಿ ಸ್ಟಾಲಿನ್ ಗೆ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು, ‘‘ಕೆಲವು ವಿಷಯಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಸರಿ. ನಾವು ಕೊರೊನಾ, ಡೆಂಗೆ, ಮಲೇರಿಯಾದಂಥ ಸೋಂಕುಗಳನ್ನು ವಿರೋಧಿಸಬಾರದು. ಆರೋಗ್ಯ ಜಾಗೃತಿಯ ಮೂಲಕ ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ಸಾಮಾಜಿಕ ಜಾಗೃತಿಯ ಮೂಲಕ ನಿರ್ಮೂಲನೆ ಮಾಡಬೇಕು,’’ ಎಂದು ಕರೆ ನೀಡಿದ್ದಾರೆ.

Latest Indian news

Popular Stories