ವೊಡಾಫೋನ್‌ ಐಡಿಯಾ: ಆರಂಭಿಕ ಹೂಡಿಕೆದಾರರಿಂದ ₹5,400 ಕೋಟಿ ಸಂಗ್ರಹ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್‌ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆಗೂ (ಎಫ್‌ಪಿಒ) ಮುನ್ನವೇ, ಆರಂಭಿಕ ಹೂಡಿಕೆದಾರರಿಂದ (ಆಯಂಕರ್ ಇನ್‌ವೆಸ್ಟರ್) ₹5,400 ಕೋಟಿ ಬಂಡವಾಳ ಸಂಗ್ರಹಿಸಿದೆ.

ಆರಂಭಿಕ ಹೂಡಿಕೆದಾರರಿಂದ ಒನ್‌97 ಕಮ್ಯುನಿಕೇಷನ್ಸ್‌ ₹8,235 ಕೋಟಿ ಹಾಗೂ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ₹5,627 ಕೋಟಿ ಬಂಡವಾಳ ಸಂಗ್ರಹಿಸಿತ್ತು.

ಈಗ ವೊಡಾಫೋನ್‌ ಐಡಿಯಾ ಸಂಗ್ರಹಿಸಿರುವುದು ಮೂರನೇ ಅತಿದೊಡ್ಡ ಮೊತ್ತವಾಗಿದೆ.

ವೊಡಾಫೋನ್‌ ಐಡಿಯಾವು ಎಫ್‌ಪಿಒ ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಏಪ್ರಿಲ್‌ 18ರಂದು ಎಫ್‌ಪಿಒ ಆರಂಭವಾಗಲಿದ್ದು, ಪ್ರತಿ ಷೇರಿಗೆ ₹10ರಿಂದ ₹11 ಬೆಲೆ ನಿಗದಿಪಡಿಸಿದೆ.

490.9 ಕೋಟಿ ಷೇರುಗಳನ್ನು 74 ನಿಧಿಗಳಿಗೆ ಪ್ರತಿ ಷೇರಿನ ₹11ರಂತೆ ಮಾರಾಟ ಮಾಡುವ ಮೂಲಕ ಈ ಬಂಡವಾಳ ಸಂಗ್ರಹಿಸಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ದೇಶೀಯ ಮ್ಯೂಚುವಲ್‌ ಫಂಡ್‌ಗಳಿಗೆ 79.52 ಕೋಟಿ ಷೇರುಗಳನ್ನು (ಶೇ 16.2ರಷ್ಟು) ಹಂಚಿಕೆ ಮಾಡಲಾಗಿದೆ. ಮೋತಿಲಾಲ್‌ ಓಸ್ವಾಲ್ ಮ್ಯೂಚುವಲ್‌ ಫಂಡ್‌, ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌, ಎಸ್‌ಬಿಐ ಜನರಲ್ ಇನ್ಶೂರೆನ್ಸ್‌ ಹಾಗೂ ಕ್ವಾಂಟ್‌ ಮ್ಯೂಚುವಲ್‌ ಫಂಡ್‌ಗೆ ಷೇರುಗಳು ಹಂಚಿಕೆಯಾಗಿವೆ ಎಂದು ತಿಳಿಸಿದೆ.

Latest Indian news

Popular Stories