ರಾಯಚೂರು: ನಗರದ ತೀನ್ ಕಂದಿಲ್ ಹತ್ತಿರದ ಮಚ್ಚಿ ಬಜಾರ ರಸ್ತೆಯಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಹಣ್ಣಿನ ಮಂಡಿಗಳು ತಕ್ಷಣವೇ ಹೈದರಾಬಾದ್ ರಸ್ತೆಯ ಎಪಿಎಂಸಿಯಲ್ಲಿ ನಿಗದಿಪಡಿಸಿದ ಬ್ಲಾಕ್ ನಂ-ಡಿ ಹತ್ತಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಂಬಾಜಿ ರಾವ್ ಮೈದರ್ ಕರ್ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಡಳಿತದ ಮೂಲಕ ಎಪಿಎಂಸಿ ಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಗರದ ಹೃದಯಭಾಗದ ತೀನ್ ಕಂದಿಲ್ ಬಳಿಯ ಮಚ್ಚಿ ಬಜಾರ್ ನಲ್ಲಿ ಹಲವಾರು ಹಣ್ಣಿನ ಮಂಡಿಗಳು ಇದ್ದು ನೇಕ ವಾಹನ ಸವಾರು, ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದರಿಂದ ಸಮಸ್ಯೆಯಾಗಿದೆ. 2023ರ ಜನವರಿ 29 ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಹಣ್ಣಿನ ಮಂಡಿಗಳಿಗಾಗಿಯೇ ಪ್ರತ್ಯೇಕವಾಗಿ 16 ಮಳಿಗೆಗಳನ್ನು ನೀಡಲಾಗಿದೆ. ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಟಿಸಿದ್ದಾರೆ. ಹಣ್ಣಿನ ಮಂಡಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವ-ಇಚ್ಛೆಯಿಂದ ಸ್ಥಳಾಂತರಕ್ಕೆ ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದರೆ ಇಂದಿನವರೆಗೂ ಮಂಡಿಗಳು ಸ್ಥಳಾಂತರ ಮಾಡಿಲ್ಲ. ಸ್ಥಳಾಂತರ ಮಾಡ ಕಾರಣ ತೀನ್ ಖಂದಿಲ್ ಮಾರ್ಗವಾಗಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಗಳು ಹೋಗಲು ವಿಳಂಬವಾಗುತ್ತಿದೆ. ಸಿಟಿ ಬಸ್‍ಗಳು ಈ ಮಾರ್ಗದಿಂದ ತಿರುಗಾಡುವುದಕ್ಕೆ ತುಂಬಾ ತೊಂದರೆ ಉಂಟಾಗಿದೆ ಎಂದು ದೂರಿದರು.
ಶಾಲಾ ಕಾಲೇಜುಗಳ ಸಮಯದಲ್ಲಿ ಹಣ್ಣಿನ ಲಾರಿಗಳು ಅನ್‍ಲೋಡ್ ಮಾಡುವುದಿರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಕೊಳೆತ ಹಣ್ಣುಗಳನ್ನು ರಸ್ತೆಯಲ್ಲಿ ಮತ್ತು ಚರಂಡಿಗಳಲ್ಲಿ ಹಾಕುತ್ತಿರುವ ಕಾರಣ ಹೂಳು ತುಂಬಿ ದುರ್ವಾಸನೆ ಬೀರುತ್ತಿದೆ. ಕೂಡಲೇ ಹಣ್ಣಿನ ವ್ಯಾಪಾರಿಗಳ ಜೊತೆ ಸಭೆ ನಡೆಸಿ ಹಣ್ಣಿನ ಮಂಡಿ ಎಪಿಎಂಸಿಗೆ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಹೇಂದ್ರ ಮಿತ್ರ ಮತ್ತಿತರರು ಇದ್ದರು.