ರಾಯಚೂರು: ನೀರಿಗಾಗಿ ಡಿಸಿ ನಿವಾಸದ ಮುಂದೆ ಪ್ರತಿಭಟನೆ

ರಾಯಚೂರು: ನಗರದ ತಿಮ್ಮಾಪೂರುಪೇಟೆ ಬಡಾವಣೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನಗರದ ನಿಜಲಿಂಗಪ್ಪ ಕಾಲೊನಿಯಲ್ಲಿರುವ ಜಿಲ್ಲಾಧಿಕಾರಿ ನಿವಾಸದ ಮುಂದೆ ಬಡಾವಣೆಯ ನಿವಾಸಿಗಳು ಖಾಲಿ ಕೊಡ ಹಿಡಿದು ಗುರುವಾರ ಪ್ರತಿಭಟನೆ ನಡೆಸಿದರು.

ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ತಿಮ್ಮಾಪೂರುಪೇಟೆ ಬಡಾವಣೆಯಲ್ಲಿ ಕಳೆದ ಒಂದು ವರ್ಷದಿಂದ ಸಾರ್ವಜನಿಕ ನಲ್ಲಿಗಳಲ್ಲಿ ಸರಿಯಾಗಿ ನೀರು ಬಿಡುತ್ತಿಲ್ಲ. ಎರಡು ದಿನಕ್ಕೊಮ್ಮೆ ರಾತ್ರಿ 2 ಅಥವಾ 3 ಗಂಟೆಗೆ ನೀರು ಬಿಡಲಾಗುತ್ತಿದೆ. ಕೇವಲ ಒಂದು ತಾಸು ನೀರು ಬರುತ್ತಿದೆ. ಇದರಿಂದ ಎಲ್ಲರಿಗೂ ನೀರು ಸಿಗುತ್ತಿಲ್ಲ. ನೀರಿಗಾಗಿ ರಾತ್ರಿ ನಿದ್ರೆ ಮಾಡದೇ ನೀರು ತುಂಬುವ ಕಾಯಕವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಿಮ್ಮಾಪೂರುಪೇಟೆಯಲ್ಲಿ ಬೋರ್ ವೆಲ್ ಇಲ್ಲ. ಗೃಹ ಬಳಕೆಗೆ ಉಪಯೋಗಿಸಲು ನೀರು ಸಿಗುತ್ತಿಲ್ಲ. ನೀರಿಗಾಗಿ ಬಡಾವಣೆಗಳಿಗೆ ಅಲೆದಾಡಬೇಕಿದೆ. ಕೂಡಲೇ ಜಿಲ್ಲಾಧಿಕಾರಿಯವರು ಬಡಾವಣೆಗೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆಯ ಮಾಜಿ ಸದಸ್ಯ ಹರೀಶ ನಾಡಗೌಡ, ನಿರ್ಮಲಾ, ಸುಮಾ ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.

Latest Indian news

Popular Stories