
ಹದ್ದಿನ ಜಾಡಿನ ಸಂಶೋಧನೆ: ಮಹಾರಾಷ್ಟ್ರ ರಾಜ್ಯದ ತಡೋಬಾ ರಾಷ್ಟ್ರೀಯ ಉದ್ಯಾನ ವನದ ಹದ್ದು ಕಾರವಾರಕ್ಕೆ ಹಾರಿ ಬಂತು
ಕಾರವಾರ : ಬೆನ್ನ ಮೇಲೆ ಇಲೆಕ್ಟ್ರಾನಿಕ್ ಚಿಪ್ ಇರುವ ಹದ್ದಿನ ಜಾತಿಯ ಬೃಹತ್ ಗಾತ್ರದ ರಣಹದ್ದು ರವಿವಾರ ಕಾರವಾರ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ರಣಹದ್ದು ಮಹಾರಾಷ್ಟ್ರ ಸರಕಾರದಿಂದ ಸಂಶೋಧನೆಗೆ ಒಳಪಟ್ಟಿದ್ದು ಎಂದು ತಿಳಿದುಬಂದಿದೆ.
ನಗರದ ಕೋಡಿಬಾಗ ನದಿವಾಡಾದಲ್ಲಿ ಈ ರಣಹದ್ದು ಕಾಣಿಸಿಕೊಂಡಿದ್ದು, ಈ ಪಕ್ಷಿಯ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದ ಇಂಗ್ಲೀಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಪಟ್ಟಿ ಕಟ್ಟಲಾಗಿದೆ. ನೋಡಲು ರಣಹದ್ದಿನಂತೆ ಕಾಣುವ ಈ ಪಕ್ಷಿ ಜನವಸತಿಯಲ್ಲಿ ಮೀನುತ್ಯಾಜ್ಯ ದ ಆಹಾರ ಅರಸಿ ಬಂದು ಕುಳಿತಿತ್ತು . ಪಕ್ಷಿಯ ಬೆನ್ನ ಮೇಲೆ ಧ್ವನಿ ಪೆಟ್ಟಿಗೆ ಪ್ಲೇಟ್ ನಂತೆ ಕಾಣುವ ಇಲೆಕ್ಟ್ರಾನಿಕ್ ಚಿಪ್ ಇದೆ. ಹೀಗಾಗಿ ಸ್ಥಳೀಯರು ಶತ್ರು ದೇಶದಿಂದ ಗೂಡಾಚಾರಿಕೆಗಾಗಿ ಬಂದಿರಬಹುದು ಎಂದು ಆತಂಕಿಸಿದ್ದರು.
ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇದ್ದು, ಎಲೆಕ್ಟ್ರಾನಿಕ್ ಚಿಪ್ ಇರುವ ಪಕ್ಷಿ ಕಾಣಿಸಿಕೊಂಡಿರುವುದು ಹಲವು ಅನುಮಾನ ಹುಟ್ಟಿ ಹಾಕಿತ್ತು. ದೇಶದ ಮಾಹಿತಿ ಸಂಗ್ರಹಣೆಗೆ ರಣಹದ್ದು ಬಳಸಿರಬಹುದೇ ಎಂಬ ಶಂಕೆ ಹಬ್ಬಿತ್ತು. ಬರ್ಡ ಟ್ರಾಕ್ ಮಿಷನ್ ಹೊಂದಿರುವ ಪಕ್ಷಿಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಅರಣ್ಯಾಧಿಕಾರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ರಣಹದ್ದು ಮಹಾರಾಷ್ಟ್ರ ರಾಜ್ಯದಲ್ಲಿ ಇರುವ ತಡೋಬಾ ರಾಷ್ಟ್ರೀಯ ಉದ್ಯಾನ ವನದಲ್ಲಿ ಸಂಶೋಧನೆಗೆ ಒಳಪಟ್ಟಿರುವುದು ಎನ್ನುವುದು ಸ್ಪಷ್ಟವಾಗಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ರವಿಶಂಕರ್ ತಿಳಿಸಿದ್ದಾರೆ .
……..




