ವಿಶ್ವಕಪ್: ಫೈನಲ್ ಮತ್ತು ರನ್ನರ್ ಆಪ್’ನಲ್ಲಿ ಸಿಗುವ ನಗದು ಎಷ್ಟು ಗೊತ್ತಾ?

ದುಬೈ: ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 4 ಮಿಲಿಯನ್ ಡಾಲರ್ ( ಅಂದಾಜು ರೂ. 33ಕೋಟಿ) ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ( ಅಂದಾಜು 16 ಕೋಟಿ) ಲಭಿಸಲಿದೆ ಎಂದು ಅಂತಾರಾಷ್ಟ್ರೀಯ ಸಮಿತಿ ಐಸಿಸಿ ತಿಳಿಸಿದೆ.

ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯಲಿರುವ ಎಲ್ಲಾ 48 ಪಂದ್ಯಗಳಿಗೆ ಬಹುಮಾನದ ಮೊತ್ತ ಮತ್ತು ಪ್ರೋತ್ಸಾಹಧನವನ್ನು ಐಸಿಸಿ ಪ್ರಕಟಿಸಿದೆ. ಸೆಮಿಫೈನಲ್ ನಲ್ಲಿ ಸೋಲು ಅನುಭವಿಸುವ ಎರಡು ತಂಡಗಳಿಗೆ ತಲಾ ರೂ. 6 ಕೋಟಿ ದೊರೆಯಲಿದೆ.

ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗುವ ಇತರ ಆರು ತಂಡಗಳು ತಲಾ 82 ಲಕ್ಷ ರೂ. ಹಾಗೂ ಲೀಗ್ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ತಲಾ ರೂ.33 ಲಕ್ಷ ಪ್ರೋತ್ಸಾಹ ಧನ ಪಡೆಯಲಿವೆ. ಈ ವಿಶ್ವಕಪ್​ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ. ಟೀಂ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

Latest Indian news

Popular Stories