‘ಜೆಡಿಎಸ್ ಜೊತೆ ಇನ್ನೂ ಮೈತ್ರಿ ಒಪ್ಪಂದ ಅಂತಿಮವಾಗಿಲ್ಲ’: ಬಿಎಸ್ ಯಡಿಯೂರಪ್ಪ ದಿಢೀರ್ ಯೂಟರ್ನ್

ಬೆಂಗಳೂರು: ಸದ್ಯಕ್ಕೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಜೆಡಿಎಸ್​ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, JDS ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಖುದ್ದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ತಮ್ಮ ಹೇಳಿಕೆಯಿಂದ ದಿಡೀರ್ ಯೂಟರ್ನ್ ಹೊಡೆದಿರುವ ಅವರು, ಸದ್ಯಕ್ಕೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಬೇರೆ ವಿಷಯದಲ್ಲಿ ಬ್ಯುಸಿಯಾಗಿದ್ದಾರೆ. ಬಹುಶಃ ನಾಳೆ ಅಥವಾ ನಾಡಿದ್ದು ನಂತರ ಮಾತುಕತೆ ಆಗಬಹುದು. ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ, ಕಾದು ನೋಡುತ್ತೇವೆ. ಈ ಹಿಂದೆ ನಾನು ಹೇಳುವಾಗಲೂ ಒಂದು ರೂಪಕ್ಕೆ ಬಂದಿರಲಿಲ್ಲ. ಈಗಲೂ ಅಷ್ಟೇ ಮೈತ್ರಿ ವಿಚಾರ ಯಾವುದೇ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಪ್ರಧಾನಿ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಇದೇ ವೇಳೆ JDS ಬಿಜೆಪಿಯ ಬಿ ಟೀಂ ಎನ್ನುವುದು ನಿಜವಾಯ್ತು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಾನು ಮಾತಾಡಲು ಹೋಗಲ್ಲ. ಅಮಿತ್ ಶಾ ಜೊತೆ ನಾನು ಇನ್ನೂ ಮಾತಾಡಿಲ್ಲ ಎಂದರು.

Latest Indian news

Popular Stories