ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ಅಧಿಕಾರಿಗಳ ಸುಲಿಗೆ: ಆರೋಪಿ ಬಂಧನ

ಬೆಂಗಳೂರು: ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೆಳಗಾವಿ ನಗರದ ಸಂತೋಷ್ ಕೊಪ್ಪದ್ ಬಂಧಿತನಾಗಿದ್ದು, ಈ ಕೃತ್ಯದ ಪ್ರಮುಖ ಆರೋಪಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ್ ಪತ್ತೆಗೆ ತನಿಖೆ ನಡೆದಿದೆ.

ಬಂಧಿತ ಆರೋಪಿ, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ತಾವು ಹೊಂದಿರುವ ಅಕ್ರಮ ಆಸ್ತಿ ವಿವರಗಳ ಬಗ್ಗೆ ನನಗೆ ತಿಳಿದಿದ್ದು, ಪ್ರಕರಣ ಕ್ಲೋಸ್ ಮಾಡಲು ಹಣ ನೀಡುವಂತೆ ಇಲ್ಲದಿದ್ದರೆ  ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಕುರಿತು ಕೆಲ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಿದ್ದರು.
 
ಆರೋಪಿ ಕುಷ್ಟಗಿ ಮತ್ತು ಲಿಂಗಸೂರು ತಾಲೂಕಿನಲ್ಲಿ ಸರಕಾರಿ ಎಂಜಿನಿಯರ್ ಗಳಿಗೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ಪ್ರಮುಖ ಆರೋಪಿ ವಿಶಾಲ್ ಪಾಟೀಲ್ ಸಹಚರನಾಗಿರುವ ಸಂತೋಷ್ ಕೊಪ್ಪದ್ ನನ್ನು ಬಂಧನಕ್ಕೊಶಪಡಿಸಿದ್ದಾರೆ. ಆರೋಪಿಗಳಿಬ್ಬರು ಬೆಳಗಾವಿ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ. ಇದೀಗ ಪಾಟೀಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಾಟೀಲ್ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಹಣವನ್ನು ವಸೂಲಿ ಮಾಡಲು ಸಂತೋಷ್ ಕೊಪ್ಪದ್ ನನ್ನು ನೇಮಿಸಿಕೊಂಡಿದ್ದ.

Latest Indian news

Popular Stories