ಬೆಂಗಳೂರು: ನಾಮಫಲಕದಲ್ಲಿ ಕನ್ನಡ ಬಳಕೆ ಕುರಿತ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕರಿಸಿದ್ದು, ವಿಧಾನಸಭೆಯಲ್ಲಿ ಅಂಗೀಕಾರ ಪಡೆಯುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಮಳಿಗೆಗಳ ನಾಮಫಲಕ ಶೇ 60ರಷ್ಟು ಕನ್ನಡದಲ್ಲೇ ಇರಬೇಕು ಎಂದು ನಾವು ಕಾನೂನು ಮಾಡಿ ಸುಗ್ರೀವಾಜ್ಞೆ ಹೊರಡಿಸಿದ್ದೆವು. ಅದಕ್ಕೆ ರಾಜ್ಯಪಾಲರು ಅಂಕಿತ ಹಾಕದೆ, ವಿಧಾನ ಮಂಡಲ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಹೇಳಿದ್ದಾರೆಂದು ಹೇಳಿದರು.
ಜ. 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರಲು ಅನುಮೋದನೆ ನೀಡಲಾಗಿತ್ತು. ನಾಮಫಲಕದಲ್ಲಿ ಕನ್ನಡ ಕಡೆಗಣನೆ ವಿರೋಧಿಸಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸರ್ಕಾರ ಈ ನಿಲುವು ಪ್ರಕಟಿಸಿತ್ತು.
ಫೆ.28ರೊಳಗೆ ಹೊಸ ನೀತಿ ಅನುಷ್ಠಾನ ಮಾಡಲಾಗುತ್ತದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ವಿಷಯ ಪ್ರಕಟಿಸಿದ್ದರು. ಅದಾದ ಒಂದು ವಾರದಲ್ಲಿ ನಡೆದ ಸಂಪುಟ ಸಭೆಯಲ್ಲಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ ನೀಡಲಾಗಿತ್ತು.
ನಾಡು-ನುಡಿಗೆ ಕಟಿಬದ್ಧವೆಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಸಾರಿತ್ತು. ಸರ್ಕಾರ ತನ್ನ ನಿರ್ಣಯವನ್ನು ರಾಜಭವನಕ್ಕೆ ಕಳಿಸಿತ್ತು. ಅಧಿವೇಶನ ನಡೆಯದ ಸಂದರ್ಭದಲ್ಲಿ ತುರ್ತಾಗಿ ಇದನ್ನು ಜಾರಿ ಮಾಡುವ ಅಗತ್ಯವಿದೆ ಈ ಕಾರಣಕ್ಕೆ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ, ರಾಜಭವನ ಸರ್ಕಾರದ ವಾದವನ್ನು ಒಪ್ಪಿಲ್ಲ. ಫೆಬ್ರವರಿಯಲ್ಲಿ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಇರುವಾಗ ಸುಗ್ರೀವಾಜ್ಞೆ ತರುವಷ್ಟು ತುರ್ತು ಏನಿದೆ ಎಂಬರ್ಥದಲ್ಲಿ ಪ್ರಸ್ತಾವನೆ ವಾಪಸ್ ಕಳಿಸಿದೆ ಎಂದು ತಿಳಿದುಬಂದಿದೆ.
ಈ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಲಿದೆ ಎಂದು ಹೇಳಿದ್ದಾರೆ.