ಕೆ‌ಎಸ್‌ಆರ್‌ಟಿಸಿ ಹೆಸರು ಬಳಕೆ ವಿಚಾರ: ಕೇರಳ ಅರ್ಜಿ ವಜಾ, ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಜಯ

ಬೆಂಗಳೂರು: ಕರ್ನಾಟಕ ‘ಕೆ‌ಎಸ್​ಆರ್​ಟಿಸಿ’ ಎಂದು ಹೆಸರು ಬಳಸುತ್ತಿರುವುದನ್ನು ಪ್ರಶ್ನಿಸಿ ಕೇರಳ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ‘ಕೆ‌ಎಸ್‌ಆರ್‌ಟಿಸಿ’ ಹೆಸರು‌ ಬಳಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ.

ಕರ್ನಾಟಕವು 1973ರಿಂದ ಕೆಎಸ್‌ಆರ್‌ಟಿಸಿ ಲೋಗೊ ಬಳಸುತ್ತಿರುವ ಬಗ್ಗೆ ದಾಖಲೆಗಳನ್ನು ಚೆನ್ನೈ ಟ್ರೇಡ್‌ ಮಾರ್ಕ್‌ ನೋಂದಣಿ ಅಧಿಕಾರಿಗೆ ಸಲ್ಲಿಸಿ 2013ರಲ್ಲಿ ಟ್ರೇಡ್‌ ಮಾರ್ಕ್‌ ಪ್ರಮಾಣ ಪತ್ರವನ್ನು ಪಡೆದಿತ್ತು.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲ್‌ ಬೋರ್ಡ್‌) ಮುಂದೆ ಇದನ್ನು ಪ್ರಶ್ನಿಸಿತ್ತು.

ತಿರುವಾಂಕೂರು ರಾಜ್ಯ ಸಾರಿಗೆ 1937ರಿಂದ ಇತ್ತು. ಕೇರಳ ರಾಜ್ಯ ಉದಯವಾದ ಮೇಲೆ 1965ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು. ಕೆಎಸ್‌ಆರ್‌ಟಿಸಿ ಲೋಗೊ ಬಳಕೆ ಆರಂಭಿಸಲಾಯಿತು. ಕರ್ನಾಟಕ ರಾಜ್ಯವೂ ‘ಕೆಎಸ್‌ಆರ್‌ಟಿಸಿ’ ಎಂದೇ ಬಳಸುತ್ತಿದೆ ಎಂದು ಕೇರಳವು ಆಕ್ಷೇಪಿಸಿತ್ತು.

42 ವರ್ಷಗಳಿಂದ ಕೇರಳ ರಾಜ್ಯ ಆರ್‌ಟಿಸಿಯು ‘ಕೆಎಸ್‌ಆರ್‌ಟಿಸಿ’ ಬಳಸುತ್ತಿರುವುದರಿಂದ ಕರ್ನಾಟಕದ ಟ್ರೇಡ್‌ ಮಾರ್ಕ್‌ ಪ್ರಮಾಣ ಪತ್ರವನ್ನು ಅಮಾನ್ಯಗೊಳಿಸಬೇಕು ಎಂದು ವಾದಿಸಿತ್ತು.

ಕರ್ನಾಟಕದ ಲೋಗೊದಲ್ಲಿ ‘ಗಂಡಭೇರುಂಡ‘ ಗುರುತು ಬಳಕೆಗೆ ಹಕ್ಕುಸ್ವಾಮ್ಯ ಪಡೆಯಲಾಗಿದೆ. ಕೇರಳದ ಲೋಗೊದಲ್ಲಿ ‘ಆನೆ’ ಗುರುತು ಇದ್ದು, ಪ್ರತ್ಯೇಕ ಟ್ರೇಡ್‌ ಮಾರ್ಕ್‌ ಹೊಂದಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು.

ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯನ್ನು ರದ್ದುಗೊಳಿಸಿ, ಅಲ್ಲಿರುವ ಪ್ರಕರಣಗಳನ್ನು ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾಯಿಸಿತ್ತು.

ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿದ ಮದ್ರಾಸ್ ಹೈಕೋರ್ಟ್‌ ಉಭಯ ರಾಜ್ಯಗಳ ವಾದ–ಪ್ರತಿವಾದ ಆಲಿಸಿ, ಕೇರಳದ ಅರ್ಜಿಯನ್ನು ಡಿ.12ರಂದು ವಜಾಗೊಳಿಸಿತು. ಈ ಮೂಲಕ ಕರ್ನಾಟಕದ ವಾದವನ್ನು ಎತ್ತಿ ಹಿಡಿಯಿತು.

‘ಕೇರಳ ರಾಜ್ಯದವರೂ ‘ಕೆಎಸ್‌ಆರ್‌ಟಿಸಿ’ ಎಂದೇ ಬಳಕೆ ಮಾಡುವುದನ್ನು ನಾವು ಆಕ್ಷೇಪಿಸಿರುವುದಿಲ್ಲ. ಅವರೇ ಆಕ್ಷೇಪಣೆ ಸಲ್ಲಿಸಿದ್ದು, ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿದೆ. ಇಲ್ಲಿವರೆಗೆ ಮತ್ತು ಇನ್ನು ಮುಂದೆಯೂ ಕೆಎಸ್‌ಆರ್‌ಟಿಸಿ ಎಂದು ಬಳಸಲು ನಮಗೆ ಯಾವುದೇ ಕಾನೂನಿನ ಅಭ್ಯಂತರವಿಲ್ಲ’ ಎಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories