ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ತಮ್ಮ ಪಕ್ಷದ ಹೆಸರನ್ನು “ಭಷ್ಟರ ಜನತಾ ಪಕ್ಷ” ಎಂದು ಬದಲಾಯಿಸಿಕೊಳ್ಳಲಿ – ರಮೇಶ್ ಕಾಂಚನ್

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ವಿರುದ್ದ 40 ಲಕ್ಷ ರೂ. ಲಂಚದ ಸ್ವೀಕರಿಸುತ್ತಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಎಂಟು ಕೋಟಿಗೂ ಅಧಿಕ ಮೊತ್ತದ ಹಣ ಹಾಗೂ ಕೆ.ಜಿ ಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡಿರುವುದು ಬಿಜೆಪಿಗರ 40% ಕಮೀಷನ್ ಧಂದೆಗೆ ಪ್ರತ್ಯಕ್ಷ ಉದಾಹರಣೆಯಾಗಿದೆ ಆದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ತಮ್ಮ ಪಕ್ಷದ ಹೆಸರನ್ನು ಭಷ್ಟರ ಜನತಾ ಪಕ್ಷ ಎಂದು ಬದಲಾಯಿಸಿಕೊಳ್ಳುವುದು ಉತ್ತಮ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತೆತ್ತಿದರೆ ಬಿಜೆಪಿಗರು ನಾವು ಸತ್ಯ ಹರಿಶ್ಚಂದ್ರರು, ನಮ್ಮ ಕೈ ಬಿಳಿಯ ಹಾಲಿನಂತೆ ಶುಭ್ರವಾಗಿದೆ ಎಂದು ಬಡಾಯಿಕೊಚ್ಚಿಕೊಳ್ಳುವ ಬಿಜೆಪಿ ನಾಯಕರ ಭ್ರಷ್ಠಾಚಾರದ ಅನಾವರಣ ಪ್ರತಿ ನಿತ್ಯ ಎಂಬಂತೆ ನಡೆಯುತ್ತಿದೆ. ಡಬಲ್ ಇಂಜಿನ್ ಬಿಜೆಪಿ ಸರಕಾರ ಭರ್ತಿ 40% ಕಮಿಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆಯಾಗಿದೆ.


ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ಹೇಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಯಿ ತಪ್ಪಿ ಹೇಳಿದ್ದು ನಿಜವಾಗಿ ಬಿಜೆಪಿಗರು ಕರ್ನಾಟಕವನ್ನು ಭ್ರಷ್ಠಾಚಾರದ ಕೂಪವನ್ನಾಗಿ ಮಾಡಲು ಹೊರಟಿರುವುದು ಎದ್ದು ಕಾಣಿಸುತ್ತದೆ. ಬಿಜೆಪಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪರವಾಗಿ ಅವರ ಪುತ್ರ ಮಾಡಾಳ್ ಪ್ರಶಾಂತ್ ಅವರು ಭ್ರಷ್ಠಾಚಾರದ ಮೂಲಕ ಕಂತೆ ಕಂತೆ ಹಣವನ್ನು ತನ್ನ ಎಟಿಎಂ ಖಾತೆಗೆ ಇಳಿಸಿಕೊಂಡಿರುವುದು ಲೋಕಾಯುಕ್ತ ದಾಳಿಯಿಂದ ಬಯಲಾಗಿದೆ.


ಕಳೆದ ಮೂರೂವರೆ ವರ್ಷದಿಂದ ಕಮಿಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ ಎಂದು ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ನಿಮಗೆ ನಿಜವಾದ ನೈತಿಕತೆ ಇದ್ದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಕಿತ್ತೊಗೆಯುವ ಕೆಲಸ ಮಾಡಿ ಇಲ್ಲವಾದರೆ ಅವರ ಮೂಲಕ ನಿಮ್ಮ ಕಿಸೆಯೂ ಕೂಡ ತುಂಬುತ್ತಿದೆ ಎಂಬ ಅನುಮಾನ ಕಾಡುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories