ಶಿಕ್ಷಕರ ಕಿರುಕುಳ ಆರೋಪ: ಬಾಲಕಿ ಆತ್ಮಹತ್ಯೆ

ಬೆಂಗಳೂರು: ಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದ ಪಾರ್ವತಿಪುರದಲ್ಲಿರುವ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾರಾ ಮನೆಯಲ್ಲಿ ವೇಲ್ ನಿಂದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಜೂನ್ 20ರಂದು ಶಾಲೆಯಿಂದ ಮನೆಗೆ ಬಂದ ನಂತರ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಆಕೆಯ ಪೋಷಕರು ಗಮನಿಸಿದರು. ಆದರೆ ಅದನ್ನು ನಿರ್ಲಕ್ಷಿಸಿದ್ದರು. ಸಾರಾ ಊಟ ಮಾಡಿ ನಂತರ ತನ್ನ ಕೋಣೆಗೆ ಹೋಗಿದ್ದಳು. ಎಷ್ಟು ಒತ್ತಾಯಿಸಿದರೂ ಆಕೆ ಕೋಣೆಯಿಂದ ಹೊರಗೆ ಬರದಿದ್ದಾಗ ಪೋಷಕರು ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ. ಕೂಡಲೇ ಆಕೆಯನ್ನು ನರ್ಸಿಂಗ್ ಹೋಂಗೆ ಕರೆದೊಯ್ದರೂ ವೈದ್ಯರು ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನಳಿನಾ ಮತ್ತು ಖಮರ್ ತಾಜ್ ಎಂಬ ಇಬ್ಬರು ಶಿಕ್ಷಕರಿಂದ ಚಿತ್ರಹಿಂಸೆ ಮತ್ತು ಕಿರುಕುಳದ ಬಗ್ಗೆ ಪೋಷಕರಿಗೆ ಆಕೆಯ ಸ್ನೇಹಿತರ ಮೂಲಕ ಇತ್ತೀಚೆಗೆ ತಿಳಿದುಬಂದಿದೆ. ಇಬ್ಬರೂ ಶಿಕ್ಷಕರು ಬಾಲಕಿಯನ್ನು ಕ್ಷುಲ್ಲಕ ಕಾರಣಗಳಿಗಾಗಿ ನಿಂದಿಸುತ್ತಿದ್ದರು ಮತ್ತು ಆಗಾಗ್ಗೆ ಅವಮಾನಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕೆಲವು ದಿನಗಳ ಮೊದಲು ತರಗತಿಯಲ್ಲಿ ವಿದ್ಯಾರ್ಥಿನಿಯರ ಮುಂದೆ ಸಾರಾಗೆ 100 ಸಲ ಬಸಕಿ ಹೊಡೆಸಿದ್ದರು. ಇದೇ ಅಲ್ಲದೆ ಶಿಕ್ಷಕಿ ನಳಿನ ಸಾರಾಗೆ ನಿನ್ನ ಮುಖ ನಾನು ನೋಡುವುದಿಲ್ಲ. ಕೊನೆ ಬೆಂಚಿಗೆ ಹೋಗಿ ಕುಳಿತುಕೊ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡ ದಿನ ಸಾರಾಳನ್ನು ಇಬ್ಬರು ಶಿಕ್ಷಕರು ಪ್ರತ್ಯೇಕ ಕೋಣೆಗೆ ಕರೆದೊಯ್ದಿದ್ದರು. ಆದರೆ ಹಿಂತಿರುಗುವಾಗ ಕಣ್ಣೀರು ಹಾಕುತ್ತಾ ಬಂದಿದ್ದಳು. 

ಇದೇ ಅಲ್ಲದೆ ಶಿಕ್ಷಕ ಖಮರ್ ತಾಜ್ ನ ಮಗ ಹಮೀನ್ ಎಂಬಾತ ಸಹ ಸಾರಾ ಹಿಂದೆ ಬಿದ್ದು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ತಾನು ಸಾರಾಳನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ತನ್ನ ಸ್ನೇಹಿತರಿಗೆಲ್ಲ ಹೇಳಿದ್ದ. ತನ್ನ ಪ್ರೀತಿ ಪ್ರಸ್ತಾವನೆಯನ್ನು ನಿರಾಕರಿಸಿದರೆ ತಕ್ಕ ಪಾಠ ಕಲಿಸುವುದಾಗಿಯೂ ಬೆದರಿಕೆ ಹಾಕಿದ್ದನು. ಹೀಗಾಗಿ ತನಗೆ ಬದುಕಲು ಕಷ್ಟವಾಗುತ್ತಿದೆ. ಸಾಯಬೇಕು ಎಂದು ಸಾರಾ ತನ್ನ ಸ್ನೇಹಿತರ ಬಳಿ ಹೇಳಿದ್ದಳು. ಇನ್ನು ಮಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಶಿಕ್ಷಕ ಖಮರ್ ತಾಜ್ ತಲೆಮರೆಸಿಕೊಂಡಿದ್ದಾನೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.

Latest Indian news

Popular Stories