
ಕೇರಳ ಬಾಂಬ್ ಸ್ಪೋಟದ ಕುರಿತು ಸುಳ್ಳು ಸುದ್ದಿ ಹರಡಿ ವಿಕೃತ ಮನಸ್ಥಿತಿ ಪ್ರದರ್ಶಿಸಿದ ಮಾಧ್ಯಮ – ತಾಹೀರ್ ಹುಸೇನ್
ನಿನ್ನೆ ಕೇರಳ ರಾಜ್ಯದಲ್ಲಿ ನಡೆದ ಬಾಂಬ್ ಸ್ಫೋಟ ಕುರಿತು ಸುಳ್ಳು ಸುದ್ದಿ ಹರಡಿಸಿ ಕೆಲ ಮಾಧ್ಯಮಗಳು ವಿಕೃತ ಮನಸ್ಥಿತಿ ಪ್ರದರ್ಶಿಸಿದೆ ಯಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಮಾತನಾಡುತ್ತಾ ಕೇರಳದಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಈಗಾಗಲೇ ಮಾರ್ಟಿನ್ ಎಂಬ ವ್ಯಕ್ತಿ ನಿನ್ನೆ ಮಧ್ಯಾಹ್ನ ದೊಳಗೆ ಶರಣಾಗಿದ್ದು ಇಲ್ಲಿನ ಕೆಲವು ಮಾಧ್ಯಮಗಳಿಗೆ ತೀವ್ರ ಸ್ವರೂಪದ ಹತಾಶೆ ತರಿಸಿದೆ. ಯಾಕೆಂದರೆ ಸ್ಪೋಟ ನಡೆದ ತಕ್ಷಣ ಮುಸ್ಲಿಮ್ ಸಮುದಾಯದ ಮೇಲೆ ಗೂಬೆ ಕೂರಿಸಲು ತೋರಿದ ಪ್ರಯತ್ನ ವಿಫಲವಾಗಿದ್ದರಿಂದ ಹತಾಶರಾಗಿದ್ದಾರೆ. ಪವರ್ ಟಿವಿ ಮುಸ್ಲಿಮ್ ಟೋಪಿದಾರಿ ವ್ಯಕ್ತಿಯ ಫೋಟೋ ಹಾಕಿ ಸುಳ್ಳು ಹರಡಲು ತೀವ್ರ ಆತುರ ತೋರಿತ್ತು.ಪವರ್ ಮಾತ್ರವಲ್ಲ ಇನ್ನು ಕೆಲ ಮಾಧ್ಯಮಗಳು ಆತುರದ ವರದಿ ಪ್ರಕಟಿಸಿ ಈಗ ಕೈ ಹಿಚುಕಿಕೊಂಡಿದ್ದಾರೆ. ಕೆಲವು ಪೀತ ಮಾಧ್ಯಮಗಳು ಸಮಯೋಚಿತ ವಾಗಿ ವರ್ತಿಸುವ ಬದಲಿಗೆ ಸಮಾಜಘಾತುಕವಾಗಿ ವರ್ತಿಸಿತು. ಆರೋಪಿ ಮುಸ್ಲಿಮ್ ನಾಮಧಾರಿಯಲ್ಲ ಎಂಬುದು ಅವರನ್ನು ಹತಾಶೆಗೊಳಗಾಗುವಂತೆ ಮಾಡಿತು. ಕೆಲವರು ಈ ಬಾಂಬ್ ಸ್ಫೋಟವನ್ನು ಇಸ್ರೇಲ್ ವಿರುದ್ದ ದ ಪ್ರತಿಭಟನೆಗೆ ಜೋಡಿಸಿ ದ್ವೇಷ ಹಬ್ಬಿಸುವ ಎಲ್ಲ ಪ್ರಯತ್ನ ಮಾಡಿದವು.
ಮಾರ್ಟಿನ್ ತಾನೇ ಬಾಂಬ್ ಇರಿಸಿದ್ದು ಎಂದು ತಪ್ಪೊಪ್ಪಿಕೊಂಡರೂ ಆತನನ್ನು ತೀವ್ರ ವಿಚಾರಣೆಗೊಳಪಡಿಸಬೇಕು. ವಾಸ್ತವ ವಿಚಾರ ಬಹಿರಂಗವಾಗಬೇಕು.
ನೆರೆಯ ರಾಜ್ಯದಲ್ಲಿ ಈ ಘಟನೆ ನಡೆದರೂ ಕೆಲವು ಮಾಧ್ಯಮಗಳ ಪೂರ್ವ ಗ್ರಹ ಪೀಡಿತ ನಡೆಯು ಪ್ರಾಮಾಣಿಕ ಪತ್ರಕರ್ತರ ಮೇಲೆಯೂ ನಂಬಿಕೆ ಕಳಕೊಳ್ಳುವಂತೆ ಮಾಡುತ್ತಿದೆ. ಇಂತಹ ಸಮಾಜ ಘಾತುಕ ಪ್ರಕ್ರಿಯೆಯ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ” ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.




