Trending News

Fact Check: ಬಾಂಗ್ಲಾದೇಶದಲ್ಲಿ 76 ವರ್ಷದ ಮುಸ್ಲಿಂ ವ್ಯಕ್ತಿ 12 ವರ್ಷದ ಹಿಂದೂ ಬಾಲಕಿಯ ಮದುವೆ ಎಂಬ ಸುಳ್ಳು ಸುದ್ದಿ!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಒಬ್ಬ ಹಿರಿಯ ಪುರುಷ ಮತ್ತು ಬಾಲಕಿ ಎರಡು ವಿಭಿನ್ನ ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಒಬ್ಬ ಬಳಕೆದಾರರು ವಿಡಿಯೋನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, ‘‘ಬಾಂಗ್ಲಾದೇಶ: 76 ವರ್ಷದ ಮೊಹಮ್ಮದ್ ರೋಜೋಬ್ ಅಲಿ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ವಿವಾಹವಾದರು. ಅವಳಿಗೆ ಯಾರೂ ಇಲ್ಲ; ಅವಳು ಅನಾಥೆ, ಹಾಗಾಗಿ ಅವಳನ್ನು ನನ್ನ ಹೆಂಡತಿಯಾಗಿ ಮಾಡಿಕೊಂಡೆ ಎಂದು ಮೊಹಮ್ಮದ್ ರೋಜಾಬ್ ಹೇಳಿದ್ದಾರೆ. ಇವರೆಲ್ಲ ಮೊದಲು ಮನೆಯವರನ್ನೆಲ್ಲ ಕೊಂದು ಆಮೇಲೆ ಅದೇ ರೀತಿ ಸಣ್ಣ ಪುಟ್ಟ ಮುಗ್ಧ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ನಿಜವಾಗಿ ನಡೆದ ಘಟನೆಯೇ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ 26 ಸೆಪ್ಟೆಂಬರ್ 2024 ರಂದು MB TV ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಸ್ಪಷ್ಟವಾಗಿ ಮನರಂಜನಾ ವಿಡಿಯೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಈ ಚಾನಲ್‌ನಲ್ಲಿ ಮಾಹಿತಿ ನೀಡಲಾಗಿದೆ.

ಇದಲ್ಲದೆ, Mkd bd Tv ಎಂಬ ಹೆಸರಿನ ಮತ್ತೊಂದು ಯೂಟ್ಯೂಬ್ ಚಾನಲ್‌ನಲ್ಲಿ ಇದೇ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದೇ ಚಾಲೆಲ್​ನಲ್ಲಿ ಕಿರು ಚಿತ್ರಗಳು ಮತ್ತು ಮನರಂಜನಾ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಮನರಂಜನೆಗಾಗಿ ಈ ಎರಡೂ ಚಾನೆಲ್‌ಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ಇತರ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಕಾಣಿಸುವ ಪ್ರಮುಖ ಪಾತ್ರಗಳೆಲ್ಲವರೂ ಹಿರಿಯ ವಯಸ್ಸಿನವರೇ ಆಗಿದ್ದಾರೆ. ಒಂದು ವಿಡಿಯೋದ ಶೀರ್ಷಿಕೆಯಲ್ಲಿ ’95 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ’ ಎಂದು ಬರೆಯಲಾಗಿದೆ.

ಹೀಗಾಗಿ ವೈರಲ್ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ.ಆದ್ದರಿಂದ ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆ ಸುಳ್ಳು.

https://youtu.be/IM1IbTeJlTQ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button