ಅಜೆಕಾರು ಕೊಲೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಅಜೆಕಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಕಾರ್ಕಳದ ದಿಲೀಪ್ ಹೆಗ್ಡೆ (28)ಯನ್ನು ಪೊಲೀಸರು ಇಂದು ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಆರೋಪಿಯನ್ನು ತೀವ್ರ ತನಿಖೆ ಹಾಗೂ ವಿಚಾರಣೆಗೆ ಒಳಪಡಿಸಿ ಮಹಜರು ಪ್ರಕ್ರಿಯೆ ಮುಗಿಸಿದ್ದು, ಇದೀಗ ಆರೋಪಿಯ ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆತನನ್ನು ಬಿಗಿ ಭದ್ರತೆಯಲ್ಲಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ್ಯಾಯಾಲಯವು ಆರೋಪಿ ದಿಲೀಪ್ ಹೆಗ್ಡೆಗೆ ನ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಪ್ರಮುಖ ಆರೋಪಿ ಪ್ರತಿಮಾ ಈಗಾಗಲೇ ನ.7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ಗೂಗಲ್‌ನಲ್ಲಿ ಹುಡುಕಾಟ: ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ(44) ಯನ್ನು ಅವರ ಪತ್ನಿ ಪ್ರತಿಮಾ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ, ಆಹಾರದಲ್ಲಿ ರಾಸಾಯನಿಕ ವಸ್ತು ಬೆರೆಸಿ ತಿನ್ನಿಸಿ, ಅನಾರೋಗ್ಯಕ್ಕೆ ಒಳಗಾಗು ವಂತೆ ಮಾಡಿ, ಅ.20ರಂದು ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಆರೋಪಿ ದಿಲೀಪ್ ಹೆಗ್ಡೆ ರಾಸಾಯನಿಕ ವಸ್ತುವನ್ನು ಶಾಲೆಗಳ ಪ್ರಯೋಗಾಲಯಕ್ಕೆ ಪೂರೈಕೆ ಮಾಡುವ ಉಡುಪಿ ವಳಕಾಡುವಿನಲ್ಲಿರುವ ಉಡುಪಿಯ ರಾಮನ್ಸ್ ಲ್ಯಾಬ್‌ನಿಂದ ಖರೀದಿಸಿದ್ದನು. ಈ ಕುರಿತು ಆತ ಗೂಗಲ್‌ನಲ್ಲಿ ಹುಡುಕಾಟ ಮಾಡಿ, ಆ ರಾಸಾಯನಿಕ ಹಾಗೂ ಅದು ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಂದ್ದನು ಎನ್ನಲಾಗಿದೆ.

ಅಲ್ಲದೆ ದಿಲೀಪ್ ಹೆಗ್ಡೆಯು ರಾಮನ್ಸ್ ಲ್ಯಾಬ್‌ಗೆ ತೆರಳಿ, ತಾನು ವಿದ್ಯಾರ್ಥಿ ಎಂಬುದಾಗಿ ಹೇಳಿಕೊಂಡಿದ್ದು, ನನಗೆ ಪ್ರಯೋಗಾಲಯದ ಬಳಕೆಯ ಉದ್ದೇಶಕ್ಕೆ ರಾಸಾಯನಿಕ ವಸ್ತು ನೀಡುವಂತೆ ಕೇಳಿ ಖರೀದಿಸಿದ್ದನು ಎಂದು ತಿಳಿದು ಬಂದಿದೆ. ಈತ ಮುಂಬೈಯಲ್ಲಿ ತನ್ನ ಶಿಕ್ಷಣ ಪೂರೈಸಿದ್ದು, ಬಿಕಾಂ ಪದವೀಧರನಾಗಿದ್ದಾನೆ

Latest Indian news

Popular Stories