ಮಣಿಪಾಲ ವಿದ್ಯುತ್ ಬಿಲ್ ಪಾವತಿ ಕೇಂದ್ರದಲ್ಲಿ ಅವ್ಯವಸ್ಥೆ| ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ: ಸಮಸ್ಯೆ ಪರಿಹಾರಕ್ಕೆ ಆಗ್ರಹ

ಮಣಿಪಾಲ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಣಿಪಾಲ ಉಪವಿಭಾಗದ ಕ್ಯಾಶ್ ಕೌಂಟರ್‌ನ ಅವ್ಯವಸ್ಥೆಯಿಂದಾಗಿ ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರು ದಿನವಿಡೀ ಕೆಲಸ ಬಿಟ್ಟು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ತಿಂಗಳಿನಿಂದ ಜನರು ಎದುರಿಸುತ್ತಿರುವ ಈ ಸಮಸ್ಯೆಯ ಬಗ್ಗೆ ಮೆಸ್ಕಾಂ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಣಿಪಾಲದಿಂದ ಮೂರು ಕಿ. ಮೀ. ದೂರದಲ್ಲಿರುವ ಮಣಿಪಾಲ ಕೈಗಾರಿಕೆ ವಲಯದಲ್ಲಿರುವ ಮೆಸ್ಕಾಂ ಮಣಿಪಾಲದ ಉಪ ವಿಭಾಗದಲ್ಲಿ ಹಣ ಪಾವತಿ ಕೇಂದ್ರವನ್ನು ತೆರೆದಿದ್ದು, ಇದೀಗ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಜನರು ರೋಸಿ ಹೋಗಿದ್ದಾರೆ.

ಕೆಲವು ತಿಂಗಳ ಹಿಂದೆ ಮಣಿಪಾಲ ಆರ್‌ಎಸ್‌ಬಿ ಭವನದಲ್ಲಿ ವಿದ್ಯುತ್ ಬಿಲ್ ಪಾವತಿ ಕೇಂದ್ರವಿತ್ತು. ನಂತರ ಅದನ್ನು ತೆರವುಗೊಳಿಸಿ ಕೈಗಾರಿಕೆ ವಲಯಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಒಬ್ಬ ಸಿಬಂದಿ ಇದ್ದು, ನಗದು ಸ್ವೀಕಾರ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಜನರು ಸಾಕಷ್ಟು ಕಾಲ ಸಾಲಿನಲ್ಲಿ ನಿಲ್ಲಬೇಕಾಗಿದೆ.

ಮಣಿಪಾಲ, ಪರ್ಕಳ, ಹೆರ್ಗ ಪರಿಸರದ ಜನರೂ ಕೂಡ ಇಲ್ಲಿಯೇ ಬಿಲ್ ಪಾವತಿಸಬೇಕು. ಬೆಳಗ್ಗೆ ಬೇಗ ಕೆಲಸಕ್ಕೆ ಹೋಗುವರು ಅಥವಾ ಕಚೇರಿ ಕೆಲಸ, ಕಾಲೇಜಿಗೆ ಹೋಗುವ ಇಲ್ಲಿ ಬಿಲ್ ಪಾವತಿಸಿ ಬಂದರೆ ಸಂಕಷ್ಟ ಪಡುವ ಪರಿಸ್ಥಿತಿ ಎದುರಾಗುತ್ತದೆ. 10-15 ನಿಮಿಷದಲ್ಲಿ ಆಗಬೇಕಾದ ಕೆಲಸ ಗಂಟೆಗಟ್ಟಲೇ ಕಾಯಬೇಕಾಗುತ್ತದೆ.

ಅಲ್ಲದೇ ಇಲ್ಲಿಗೆ ತೆರಳಲು ಎರಡೆರಡು ಬಸ್ ಬದಲಾಯಿಸಿಕೊಂಡು ತೆರಳಬೇಕು. ಕೂಡಲೆ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಣಿಪಾಲ ಹೃದಯ ಭಾಗದಲ್ಲಿ ಬಿಲ್ ಪಾವತಿ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಬೇಕು. ಶೀಘ್ರ ಬಿಲ್ ಪಾವತಿ ವ್ಯವಸ್ಥೆಗೆ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಮೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದ್ದಾಾರೆ.

“ಮಣಿಪಾಲ ವಿದ್ಯುತ್ ಬಿಲ್ ಪಾವತಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಕೈಗಾರಿಕೆ ವಲಯದಲ್ಲಿ ಪಾವತಿ ಕೇಂದ್ರ ಸ್ಥಾಪಿಸಿರುವ ಬಗ್ಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ದೂರುಗಳು ಕೇಳಿ ಬಂದಿವೆ. ಮಣಿಪಾಲ ನಗರ ಹೃದಯ ಭಾಗದಲ್ಲಿ ನಗರಸಭೆ ಸಂಬಂಧಿತ ಕಟ್ಟಡದಲ್ಲಿ ಪಾವತಿ ಕೇಂದ್ರ ತೆರೆಯುವ ಬಗ್ಗೆೆ ಪರಿಶೀಲನೆ ಮಾಡುತ್ತಿಿದ್ದೇನೆ. ಜನರಿಗೆ ತೊಂದರೆಯಾಗದಂತೆ ಕ್ರಮವಹಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.”

– ದಿನೇಶ್ ಉಪಾಧ್ಯ, ಅಧೀಕ್ಷಕ ಎಂಜಿನಿಯರ್, ಮೆಸ್ಕಾಾಂ ಉಡುಪಿ.

“ಮಣಿಪಾಲ ಹೃದಯಭಾಗದಲ್ಲಿ ಈ ಹಿಂದೆ ಇದ್ದ ಕ್ಯಾಾಶ್‌ಕೌಂಟರ್ ಸ್ಥಗಿತಗೊಳಿಸಿ ಮಣಿಪಾಲ ಕೈಗಾರಿಕೆ ವಲಯದಲ್ಲಿ ಬಿಲ್ ಪಾವತಿ ಕೇಂದ್ರ ತೆರೆದಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಜನರು ಬಿಲ್ ಪಾವತಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮೆಸ್ಕಾಂ ಇಲ್ಲಿನ ಸಿಬಂದಿಗೂ ಸರಿಯಾದ ತರಬೇತಿಯನ್ನು ನೀಡಿಲ್ಲ. ಮೆಸ್ಕಾಂನ ಮೇಲಾಧಿಕಾರಿಗಳಿಗೆ ಈಗಾಗಲೆ ಸಾಕಷ್ಟು ಭಾರಿ ತಿಳಿಸಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೂಡಲೆ ಜನರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.”

-ರಾಘವೇಂದ್ರ ಬಳೆಗಾರ, ಉಪಾಧ್ಯಕ್ಷರು, ವಿದ್ಯುತ್ ಗುತ್ತಿಗೆದಾರರ ಸಂಘ, ಉಡುಪಿ ತಾಲೂಕು ಸಮಿತಿ.

1001279932 Udupi, Civic issues

Latest Indian news

Popular Stories