ಉಡುಪಿ: ಇಲ್ಲಿನ ಖಾಸಗಿ ಪ್ಯಾರ ಮೆಡಿಕಲ್ ವೀಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಗುರುವಾರ ಉಡುಪಿಗೆ ಆಗಮಿಸಿ ಉಡುಪಿ ಬನ್ನಂಜೆ ಸರಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಸಿಐಡಿ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಎಡಿಜಿಪಿ ಅವರು ಅಧಿಕಾರಿಗಳಿಂದ ತನಿಖೆಯ ವಿವರಗಳನ್ನು ಪಡೆದುಕೊಂಡು ಸಲಹೆ, ಸೂಚನೆಗಳನ್ನು ನೀಡಿದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಐಡಿ ಎಡಿಜಿಪಿ ಮನೀಷ್, ” ಉಡುಪಿಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆಉಡುಪಿ ಪೊಲೀಸರು ನಡೆಸಿದ ತನಿಖೆ ರಿಪೋರ್ಟ್ ಕೂಡಾ ಪಡೆದುಕೊಳ್ಳಲಾಗಿದೆ. ಈಗಾಗಲೇ ನಾನುಪೊಲೀಸ್ ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮಾತ್ರವಲ್ಲದೇ ಮುಂದೆ ಏನೇನು ತನಿಖಾ ಪ್ರಕ್ರಿಯೆ ನಡೆಸಬೇಕು ಈ ಬಗ್ಗೆ ಚರ್ಚಿಸಲಾಗಿದೆ” ಎಂದು ಹೇಳಿದ್ದಾರೆ.
ತನಿಖಾಧಿಕಾರಿಯಾಗಿ ಸಿಐಡಿ ಡಿವೈಎಸ್ಪಿ ಅಂಜುಮಾಲ ಅವರನ್ನು ನೇಮಕ ಮಾಡಲಾಗಿದ್ದು, ತನಿಖೆಯ ಮೇಲ್ವಿಚಾರಣೆಯನ್ನು ಸಿಐಡಿ ಎಸ್.ಪಿ ರಾಘವೇಂದ್ರ ಹೆಗಡೆ ನಡೆಸಲಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತನಿಖಾಧಿಕಾರಿ ಕೈ ಸೇರಿದ ಬಳಿಕ ಪ್ರಕರಣದ ತನಿಖೆ ಆದ ನಂತರ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆಮಾಡಲಿದ್ದೇವೆ. ಸಿಐಡಿ ತನಿಖೆ ಉಡುಪಿಯಲ್ಲಿ ಮುಂದುವರೆಯುತ್ತದೆ.ಮೂರು ಮೊಬೈಲ್ ಎಫ್ಎಸ್ಎಲ್ ವರದಿ ತನಿಖೆಯ ಒಂದು ಭಾಗವಾಗಿ ನಾವು ತೆಗೆದುಕೊಳ್ಳುತ್ತೇವೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಇದಾದ ನಂತರ ವಿಡಿಯೋ ಚಿತ್ರೀಕರಣ ಘಟನೆ ನಡೆದ ಖಾಸಗಿ ಪ್ಯಾರ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದರು.