ಸ್ವಾರ್ಥ ನಾಯಕರಿಂದ ದಲಿತ ಚಳುವಳಿ ವಿಘಟನೆ:ಜಯನ್ ಮಲ್ಪೆ


ಮಲ್ಪೆ:ದಲಿತ ಚಳುವಳಿ ಈ ನೆಲದ ಆತ್ಮವಾಗಿತ್ತು.ಇದರ ಹಿಂದೆ ಉರಿಯುವ ಪಂಜಿನಂಥ ಸೇನಾಪಡೆ ಇತ್ತು.ಆಳುವ ವರ್ಗದ ಪಿತೂರಿಗಳಿಗೆ, ನಾಯಕರ ಸ್ವಾರ್ಥಕ್ಕೆ ದಲಿತ ಚಳುವಳಿ ವಿಘಟನೆಗೊಂಡಿರುವುದು ನೋವಿನ ಸಂಗಾತಿಯೆಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.


ಅವರು ಇಂದು ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾಘಟಕ ಆಯೋಜಿಸಿದ ದಲಿತ ಚಳುವಳಿಯ ಪಿತಾಮಹ ಪ್ರೋ.ಬಿ.ಕೃಷ್ಣಪ್ಪರವರ ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ,ಹಿಂದೆ ಹೋರಾಟವೆನ್ನುವುದು ಹೃದಯಾಂತರಾಳದಿಂದ ಬದಲಾವಣೆ ಬಯಸುವ,ತ್ಯಾಗ ಬಲಿದಾನಗಳಿಗೆ ಸಿದ್ಧರಾಗಿರುವವರು ಆಡುವ ಭಾಷೆಯಾಗಿತ್ತೇ ವಿನಾ ಇಂದಿನಂತೆ ಜೀವನೋಪಾಯಕ್ಕಾಗಿ ಹೊಟ್ಟೆ ಹೊರೆಯುವವರ ದಂಧೆಯಾಗಿರಲಿಲ್ಲ ಎಂದು ಜಯನ್ ಮಲ್ಪೆ ಹೇಳಿದರು.

ಪ್ರಸ್ತುತ ದೇಶಗಳು,ಸ್ವಾತಂತ್ರ್ಯವನ್ನೂ,ರಾಷ್ಟ್ರೀಯತೆಗಳು ವಿಮೋಚನೆಯನ್ನೂ,ಜನರು ಕ್ರಾಂತಿಯನ್ನೂ ಬಯಸುತ್ತಿರುವ ಈ ಕಾಲಘಟ್ಟದಲ್ಲಿ ಈಗ ದಲಿತ ಚಳುವಳಿಗೆ ದೇಹವೂ ಇಲ್ಲ,ಬಾಯಿಯೂ ಇಲ್ಲ,ಉರಿಯುವ ಪಂಜಿನಂಥ ಕಾರ್ಯಕರ್ತರೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದರು.


ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ ಶೋಷಿತರ ಕಣ್ಮಣಿಯಾಗಿದ್ದ ಪ್ರೋ.ಬಿ.ಕೆ ನಾಡಿನಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಪ್ರಜ್ಞಾವಂತಿಕೆಯನ್ನು ಬೆಳಿಸಿದವರು.ಮಾತನಾಡಲು ಅಂಜುವ ಜನರಲ್ಲಿ ಗರ್ಜಿಸುವ ದೈರ್ಯವನ್ನು ತಂದವರು,ಇವರಿಂದಾಗಿ ದಲಿತರ ಮನೆಗಳಲ್ಲಿ ಇಂದು ಅಂಬೇಡ್ಕರ್ ಪೋಟೋಗಳನ್ನು ಕಾಣತೊಡಗಿರುವು ಎಂದರು.


ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ ಮಾತನಾಡಿ ಯಾವುದೇ ಸಾಮಾಜಿಕ ಚಳುವಳಿ ರಾಜಕೀಯದಿಂದ ಹೊರತಲ್ಲ.ವೈಚಾರಿಕ ಸ್ಪಷ್ಟತೆ,ಖಚಿತ ಆಲೋಚನೆ ಎಲ್ಲಕ್ಕಿಂತ ಹೆಚ್ಚಾಗಿ ನಿಜವಾದ ಕಳಕಳಿಯಿಂದ ಸಂಘಟನೆಗಾಗಿ ದುಡಿಯುವ ಹುಮ್ಮಸ್ಸು ಇರುವ ಕಾರ್ಯಕರ್ತರಿಂದ ಮಾತ್ರ ದಲಿತ ಚಳವಳಿ ಉಳಿಸಿಕೊಳ್ಳಲು ಸಾಧ್ಯ ಎಂದರು.


ದಲಿತ ಮುಖಂಡರಾದ ಹರೀಶ್ ಸಾಲ್ಯಾನ್,ಸಂತೋಷ್ ಕಪ್ಪೆಟ್ಟು, ಸಾಧು ಚಿಟ್ಪಾಡಿ,ಪ್ರಸಾದ್ ಮಲ್ಪೆ,ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಗುಣವಂತ ತೊಟ್ಟಂ,ವಿನಯ ಬಲರಾಮನಗರ,ಈಶ್ವರ್ ಗದಗ್,ಯೋಗೀಶ್ ಮಲ್ಪೆ, ಅಚ್ಚುತ್ತ ಕದ್ಕೆ,ವಿಶ್ವನಾಥ ಕದ್ಕೆ,ಶ್ರೀಮತಿ ಶಶಿಕಲಾ ತೊಟ್ಟಂ,ಸಂಕಿ ತೊಟ್ಟಂ, ಕಲಾವತಿ ತೊಟ್ಟಂ,ಶ್ರೀಮತಿ ಅರ್ಚನ ಮುಂತಾದವರು ಉಪಸ್ಥಿತರಿದ್ದರು.
ಸುಕೇಶ್ ಪುತ್ತೂರು ಸ್ವಾಗತಿಸಿ,ನವೀನ್ ಬನ್ನಂಜೆ ವಂದಿಸಿದರು.

Latest Indian news

Popular Stories