ಉಡುಪಿ: ಯಾವುದೇ ಕಾರಣಕ್ಕೆ ಜಿಲ್ಲಾಡಳಿತ ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಬಾರದು. ಒಂದು ವೇಳೆ ನೀಡಿದರೆ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ಸುತ್ತೋಲೆ ಹೊರಡಿಸಿದರೂ ಜಿಲ್ಲಾಡಳಿತ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ಭೋವಿ ಜನಾಂಗದವರು ಉಡುಪಿ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಸರಕಾರ ಈ ಸುತ್ತೋಲೆ ಹೊರಡಿಸಲು ಸುಳ್ಳು ವರದಿ ಹಾಗೂ ರಾಜಕಾರಣಿಗಳ ಒತ್ತಡವೇ ಕಾರಣ ಎಂದು ದೂರಿದರು.
ಆ ಜನಾಂಗದವರು ತಮಿಳುನಾಡಿನಲ್ಲಿ ಇರಬಹುದೇ ಹೊರತು ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ಇಲ್ಲ. ಇಲ್ಲಿ ಸುಳ್ಳು ಶಾಲಾ ದಾಖಲಾತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಒಂದು ಜನಾಂಗದ ಕುಲಕುಸುಬು, ಸಂಸ್ಕೃತಿ ಜೀವನ, ಅಸ್ಪಶ್ಯತೆಯನ್ನು ಅಧ್ಯಯನ ಮಾಡಿಯೇ ಜಾತಿ ಪ್ರಮಾಣಪತ್ರ ಕೊಡಬೇಕೆ ಹೊರತು ಶಾಲಾ ದಾಖಲಾತಿ ನೀಡಿದ ಕೂಡಲೇ ಕೊಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ದಸಂಸ ಜಿಲ್ಲಾ ಮುಖಂಡ ಮಂಜುನಾಥ್ ಗಿಳಿಯಾರು ಮಾತನಾಡಿ, ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಭೋವಿ ಸಮುದಾಯ ಸ್ಪರ್ಶ ಜಾತಿಗೆ ಸೇರಿದವರು. ಅವರಿಗೆ ಅಸ್ಪಶ್ಯತೆ ನೋವಿನ ಅನುಭವ ಇಲ್ಲ. ಹಾಗಾಗಿ ಅವರು ಅಶ್ಪಶ್ಯ ಜಾತಿಯವರಲ್ಲ. ಇವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವ ಯಾವುದೇ ಅರ್ಹತೆ ಇಲ್ಲ. ಆದುದರಿಂದ ಇವರ ಪ್ರತಿಭಟನೆಗೆ ಯಾವುದೇ ಕವಾಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನಿಂದ ವಲಸೆ ಬಂದ ಈ ಬಲಾಢ್ಯ ಜಾತಿಯವರಿಗೆ ಯಾವುದೇ ಕಾರಣಕ್ಕೂ ಜಾತಿಪ್ರಮಾಣಪತ್ರ ನೀಡುವ ಮೂಲಕ ನಿಜವಾದ ಅಸ್ಪಶ್ಯರಿಗೆ ಅನ್ಯಾಯ ಮಾಡಬಾರದು ಎಂದು ಹೋರಾಟ ಮಾಡಿದ್ದೇವೆ. ಅದಕ್ಕೆ ಮಣಿದ ಸರಕಾರ ಭೋವಿ ಜನಾಂಗಕ್ಕೆ ಈ ಪ್ರಮಾಣಪತ್ರ ಕೊಡುವುದನ್ನು ನಿಲ್ಲಿಸಿತ್ತು. ಇದೇ ನಿಲುವನ್ನು ಜಿಲ್ಲಾಡಳಿತ ಮುಂದುವರೆಸ ಬೇಕು. ಒಂದು ವೇಳೆ ಪ್ರಮಾಣ ಪತ್ರ ಕೊಟ್ಟರೆ ದಸಂಸ ನೇತೃತ್ವದಲ್ಲಿ ಜನಾಂದೋಲನ ಮಾಡಲಾಗುವುದು. ಅಲ್ಲದೆ ಇದರ ಹಿಂದೆ ಇರುವ ರಾಜಕಾರಣಿಗಳ ಪಿತೂರಿಯ ವಿರುದ್ಧ ಪ್ರತಿಭಟನೆ ನಡೆಸಿ ಅವರ ಬಣ್ಣ ಬಯಲಿಗೆ ಎಳೆಯುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು