ಉಡುಪಿ: ಇತ್ತೀಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ಕೊಡಂಕೂರಿನಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶ ಮತ್ತು ಸರ್ವ ಸಧಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ” ಮನುವಾದಿಗಳ ಜಾತೀ ವಾದಿಗಳ ಈ ಅಕ್ಷತೆ ಹಂಚುವ ನಾಟಕಕ್ಕೆ ನಮ್ಮ ಜನರು ಬಲಿಯಾಗಬೇಡಿ. ಈ ಅಕ್ಷತೆ ತಗೊಂಡು ಯಾರೂ ಉಧ್ಧಾರ ಆಗಲ್ಲಾ ನಾವು ಉದ್ದಾರ ಆಗಬೇಕಾದರೆ ಸ್ವಂತ ಉದ್ಯೋಗ ಮಾಡಬೇಕು ಎಂದರು.
ನಮ್ಮ ಮಕ್ಕಳ ಕೈಯಲ್ಲಿರುವ ಕೇಸರೀ ಧ್ವಜ ಕಿತ್ತು ಬಿಸಾಕಿ ಅವರ ಕೈಗೆ ಶಿಕ್ಷಣದ ಪುಸ್ತಕ ಕೊಡಿ ಎಂದು ಕರೆ ನೀಡಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಅವರು ಶೋಷಿತರು ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಬೇಕು. ಬಾಬಾಸಾಹೇಬ್ ಅಂಬೇಡ್ಕರ್ ರವರು ಇದನ್ನೇ ಪ್ರತಿಪಾದಿಸಿದರು. ಅಂಬೇಡ್ಕರ್ ರವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಮೇಲ್ವರ್ಗದವರು ಅಂದಿನ ಕಾಲಘಟ್ಟದಲ್ಲಿ ಸಾಕಷ್ಟು ತೊಂದರೆ , ಕಷ್ಟ , ಹುನ್ನಾರಗಳನ್ನು ಮಾಡಿದರು.ಆದರೆ ಬಾಬಾಸಾಹೇಬರು ಛಲ ಬಿಡದೇ ಎಲ್ಲಾ ನೋವನ್ನು ನುಂಗಿಕೊಂಡೇ ಅತ್ಯುತ್ತಮ ಶಿಕ್ಷಣ ಪಡೆದು ನಮ್ಮ ದೇಶಕ್ಕೆ ಪ್ರಪಂಚದಲ್ಲೇ ಸರ್ವಶ್ರೇಷ್ಠ ಸಂವಿಧಾನವನ್ನು ಕೊಟ್ಟರು. ಬಾಬಾಸಾಹೇಬರು ಕೊಟ್ಟ ಸಂವಿಧಾನದಿಂದಾಗಿಯೇ ನಾನಿಲ್ಲಿ ಬಂದು ನಿಂತಿದ್ದೇನೆ. ಈ ದೇಶದ ಸಂವಿಧಾನವನ್ನು ಬಾಬಾಸಾಹೇಬರು ರಚಿಸದೇ ಇರುತ್ತಿದ್ದರೆ ನಮ್ಮ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಸಂವಿಧಾನದಲ್ಲಿ ಎಲ್ಲಾ ಅವಕಾಶವನ್ನು ನಮಗೆ ಕಲ್ಪಿಸಿದ್ದಾರೆ ನಾವು ಈ ಅವಕಾಶವನ್ನು ಉಪಯೋಗಿಸಿಕೊಂಡು ನಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ಕೊಡಬೇಕು ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಉಡುಪಿ ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಅವರು ಮಾತನಾಡಿ ನಾವು ಅಂಬೇಡ್ಕರ್ ಹಾಕಿಕೊಟ್ಟ ಧ್ಯೇಯ ವಾಕ್ಯಗಳಾದ ಶಿಕ್ಷಣ ಸಂಘಟನೆ ಹೋರಾಟ ಇದರ ಮೂಲ ತತ್ವವನ್ನು ಅರಿತು ನಡೆದುಕೊಳ್ಳಬೇಕಾಗಿದೆ. ಇಂದು ನಾನು ಏನಾಗಿದ್ದೇನೋ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ರವರೇ ಕಾರಣರು. ಹಳ್ಳಿ ಹಳ್ಳಿಗಳಲ್ಲೂ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.ನಮ್ಮ ಮಕ್ಕಳು ಅರ್ಧದಲ್ಲೇ ಡ್ರಾಪೌಟ್ ಆಗದ ಹಾಗೇ ನೋಡಿಕೊಳ್ಳಬೇಕು. ಹೆಚ್ಚಿನ ಕಡೆಗಳಲ್ಲಿ ನಮ್ಮ ಮಕ್ಕಳು ಹತ್ತನೇ ತರಗತಿಯಿಂದ ಮೇಲೇ ಹೋಗೋಲ್ಲಾ ಆ ಮಕ್ಕಳ ಹೆತ್ತವರ ಮನವೊಲಿಸಿ ಅವರು ಶಿಕ್ಷಣ ಮುಂದುವರಿಸಿಕೊಂಡು ಹೋಗುವ ಹಾಗೇ ನಾವು ಮಾಡಬೇಕು ಎಂದರು.
ಮುಖ್ಯ ಭಾಷಣ ಗಾರರಾಗಿ ಮಾತನಾಡಿದ ವಕೀಲರು ದಲಿತ ಮುಖಂಡರು ಆದ ಮಂಜುನಾಥ ಗಿಳಿಯಾರು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಾವಿನ್ನೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ದುರ್ಧೈವ ಬಂದೊದಗಿದೆ. ಈ ಹೋರಾಟ ಮಾಡಲು ನಮಗೆ ಸಂಘಟನೆಯ ಅಗತ್ಯವಿದೆ. ದಲಿತರಾದ ನಾವು ಮುಖ್ಯವಾಗಿ ಭೂ ಹೋರಾಟ ಮಾಡುವ ಅಗತ್ಯವಿದೆ. ಒಂದು ಅಂಕಿ ಅಂಶದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ನಮಗಾಗಿಯೇ ಕಾದಿರಿಸಿದ ಡಿಸಿ ಮನ್ನಾ ಭೂಮಿಯು ಸುಮಾರು 1600 ಎಕರೆ ಇದೆ ಇದನ್ನು ನಮ್ಮವರಿಗೆ ಕೊಡಿಸುವ ಬಗ್ಗೆ ನಾವು ಉಡುಪಿ ಜಿಲ್ಲೆಯಲ್ಲಿ ಒಂದು ದೊಡ್ಡ ಚಳುವಳಿ ರೂಪಿಸುವ ಅಗತ್ಯತೆ ಇದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ವಿಠಲ್ ದಾಸ್ ಬನ್ನಂಜೆ , ವಾಸುದೇವ ಮುದೂರು , ಶ್ಯಾಮಸುಂದರ್ ತೆಕ್ಕಟ್ಟೆ , ಅಣ್ಣಪ್ಪ ನಕ್ರೆ , ವಸಂತಿ ಶಿವಾನಂದ , ಸಂಪಾವತಿ ,ವಿಠಲ ಉಚ್ಚಿಲ , ಶ್ರೀನಿವಾಸ ಮಲ್ಯಾಡಿ , ಶಿವಾನಂದ ಮೂಡುಬೆಟ್ಟು , ವಾಸುದೇವ ಮಾಸ್ಟರ್, ರಾಘವೇಂದ್ರ ಬೆಳ್ಳೆ , ವಿಠಲ ಕೆ , ಶ್ರೀಧರ್ ಕುಂಜಿಬೆಟ್ಟು, ಶಿವಾನಂದ ಬಿರ್ತಿ, ಕ್ರಷ್ಣ LIC , ಉಪಸ್ಥಿತರಿದ್ದರು.ಶಂಕರ್ ದಾಸ್ ಚೆಂಡ್ಕಳ ಮತ್ತು ಹರೀಶ್ಚಂದ್ರ ಅವರು ಹೋರಾಟ ಗೀತೆಗಳನ್ನು ಹಾಡಿದರು. ಭಾಸ್ಕರ ಮಾಸ್ಟರ್ ಸ್ವಾಗತಿಸಿ ಪರಮೇಶ್ವರ ಉಪ್ಪೂರು ವಂದಿಸಿದರು.