ಗಂಗೊಳ್ಳಿ | ಕಳ್ಳತನ ಪ್ರಕರಣ: ಭಾಗಿಯಾದ ಅಂತರಾಜ್ಯ ಆರೋಪಿಯ ಬಂಧನ

ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಬಳಿಯಿರುವ ಪಂಚಗಂಗಾ ಸೊಸೈಟಿಯಲ್ಲಿ ದಿನಾಂಕ: 22/06/2024 ರಂದು ಸಮಯ ಸುಮಾರು 01:40 ಗಂಟೆಗೆ ಪಂಚಗಂಗಾ ಸೊಸೈಟಿಯ ಹಿಂಬದಿಯ ಕಿಟಕಿಯನ್ನು ಕತ್ತರಿಸಿ ಒಳ ಬಂದ ಕಳ್ಳನನ್ನು ಲೈವ್ ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿದ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿ ಎಸ್ ಐ ಬಸವರಾಜ ಕನಶೆಟ್ಟಿಯವರು ಸಿಬ್ಬಂದಿ ಮೋಹನ ಪೂಜಾರಿ ಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಾಂಚಿನ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಕೂಡ ಬರ ಹೇಳಿದ್ದು, ಅವರೊಂದಿಗೆ ಸೇರಿ ಕಳವು ಮಾಡುತ್ತಿದ್ದವನನ್ನು ವಶಕ್ಕೆ ಪಡೆಯಲಾಗಿದೆ.

ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಅಂತರಾಜ್ಯ ಆರೋಪಿ ಪ್ರಕಾಶ್ ಬಾಬು @ ನಿಯಾಝ್ ಪ್ರಾಯ: 46 ವರ್ಷ, ತಂದೆ: ಚಂದ್ರ ಬಾಬು ವಾಸ: ತಾಝಃಚೆಯಿಲ್ ವೀಡು, ಚೆರಿಯಳ್ಳಿಕಲ್ ಅಲಪ್ಪಾಡ್, ಕರುನಾಗಪಳ್ಳಿ ತಾಲೂಕು, ಕೊಲ್ಲಂ ಜಿಲ್ಲೆ, ಕೇರಳ ರಾಜ್ಯ ಎಂದು ತಿಳಿಯಲಾಗಿದ್ದು, ಈತನ ವಿರುದ್ಧ ಕೇರಳ ರಾಜ್ಯದ ಕುಂಬಳೆ ಪೊಲೀಸ್ ಠಾಣೆಯಲ್ಲಿ, ಕ್ಯಾಲಿಕಟ್ ನ ಮಾರಾಡ ಪೊಲೀಸ್ ಠಾಣೆಯಲ್ಲಿ ತಲಶೇರಿ ಪೊಲೀಸ್ ಠಾಣೆಯಲ್ಲಿ, ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ, ಆಲಪ್ಪಿ ಮಾವಿಲಕಾರ ಪೊಲೀಸ್ ಠಾಣೆ, ಚೆಂಗನೂರು ಪೊಲೀಸ್ ಠಾಣೆ ಹಾಗೂ ಕರ್ನಾಟಕ ರಾಜ್ಯದಲ್ಲಿ ದ. ಕ ಜಿಲ್ಲೆಯ ಕೊಣಾಜೆ ಠಾಣೆಯಲ್ಲಿ, ಕುಂದಾಪುರ ಠಾಣೆಯಲ್ಲಿ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರಣ ಸೇರಿ ಸುಮಾರು 13 ಕಳವು ಪ್ರಕರಣಗಳಿರುತ್ತದೆ.

ಈತನು ದಿನಾಂಕ:15/06/2024 ರಂದು ಕೇರಳ ರಾಜ್ಯದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ಸರಹದ್ದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆರೋಪಿಯಿಂದ ಕಳವು ಮಾಡಿದ ನಗದು 2,000 ರೂಪಾಯಿ ಮೌಲ್ಯದ ಹಣ, ಕಳವು ಮಾಡಲು ಬಂದ ಒಂದು ಸುಝುಕಿ ಎಕ್ಸೆಸ್ ಮೋಟಾರು ಸೈಕಲ್, 1 ಮೊಬೈಲ್ ಸೆಟ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್, ಕಟ್ಟಿಂಗ್ ಪ್ಲೇಯರ್ ಇನ್ನಿತರ ವಸ್ತುಗಳನ್ನು ಸ್ವಾಧೀನ ಪಡಿಸಿಕೊಂಡು ನಂತರ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Latest Indian news

Popular Stories