ಸಾರ್ವಜನಿಕ ಹಿತಾಸಕ್ತಿ ಕಾರಣ ಮುಂದಿಟ್ಟು ವಿದ್ಯುತ್ ದರ ಪರಿಷ್ಕರಣೆ ಆದೇಶ ರದ್ದು ಮಾಡಿ: ಕೋಟ ಮನವಿ

ಉಡುಪಿ: ಪ್ರತಿ ವರ್ಷ ಜನವರಿ ತಿಂಗಳಲ್ಲಿ ಕೆಇಆರ್‌ಸಿ ವಿದ್ಯುತ್ ದರ ಏರಿಕೆಯ ಪ್ರಸ್ತಾವ ಸಲ್ಲಿಸುವ ರೂಢಿಯಿದೆ. ನಮ್ಮ ಸರಕಾರ ಬೆಲೆಯೇರಿಕೆಗೆ ಅನುಮೋದನೆ ಕೊಟ್ಟಿರಲಿಲ್ಲ. ಚುನಾವಣೆ ಘೋಷಣೆಯಾದ ನಂತರ ಅಧಿಕಾರಿಗಳು ಅನುಮೋದನೆ ಕೊಟ್ಟಿರಬಹುದು. ಸಾರ್ವಜನಿಕ ಹಿತಾಸಕ್ತಿಯ ಕಾರಣ ಮುಂದಿಟ್ಟು ಆದೇಶ ರದ್ದು ಮಾಡಿ ಎಂದು ಸಿದ್ದರಾಮಯ್ಯ, ಡಿಕೆಶಿ, ಕೆ.ಜೆ.ಜಾರ್ಜ್ ಅವರಲ್ಲಿ ನಾನು ವಿನಂತಿ ಮಾಡುತ್ತೇನೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಮಾಡಿದ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ವಿದ್ಯುತ್ ದರ ಪರಿಷ್ಕರಣೆ ಆದೇಶವನ್ನು ವಾಪಸ್ ಪಡೆಯಲಿ. ಇದು ಕಾಯ್ದೆ ತಿದ್ದುಪಡಿಯ ವಿಚಾರ ಅಲ್ಲ, ಸುತ್ತೋಲೆಯನ್ನ ವಾಪಾಸ್ ಪಡೆದರೆ ಸಾಕಾಗುತ್ತದೆ. 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಎರಡು ಮೂರು ಪಟ್ಟು ವಿದ್ಯುತ್ ದರ ಏರಿಸುವುದು ಸಮಂಜಸ ಅಲ್ಲ. ರಾಜ್ಯದ ಜನರಿಗೆ ಹಿಂದಿನ ದರವನ್ನೇ ನಿಗದಿಪಡಿಸಿ ಎಂದು ಒತ್ತಾಯಿಸಿದರು.

ಬಡವರಿಗೆ ಕೊಟ್ಟ ಯೋಜನೆಯನ್ನು ಬಿಜೆಪಿ ವಿರೋಧಿಸಿಲ್ಲ, ಬೆಂಬಲಿಸಿದೆ. ಶಕ್ತಿ ಯೋಜನೆಯನ್ನು ನಾವು ಸ್ವಾಗತ ಮಾಡುತ್ತೇವೆ. ಆರ್ಥಿಕ ತಜ್ಞರು, ನಿವೃತ್ತ ಅಧಿಕಾರಿಗಳು ಗ್ಯಾರೆಂಟಿಗಳ ಜಾರಿ ಕಷ್ಟ ಎಂದು ಹೇಳಿದ್ದರು. ಆಗ ಸಂದೇಹ, ಸಂಶಯವನ್ನು ಬಿಜೆಪಿ ವ್ಯಕ್ತಪಡಿಸಿದ್ದು ನಿಜ. ಉಳಿದ ನಾಲ್ಕು ಗ್ಯಾರಂಟಿ ಜಾರಿಗೆ ಸರ್ವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ ಎಂದರು.

ಕೇಂದ್ರ ಸರಕಾರ 5 ಕೆ.ಜಿ ಅಕ್ಕಿ ಕೊಡುತ್ತಿದೆ ನೀವು ಪ್ರತ್ಯೇಕ 10 ಕೆ.ಜಿ ಕೊಡುತ್ತೀರಾ? 200 ಯೂನಿಟ್ ಭರವಸೆಯನ್ನು ಬದಲಾವಣೆ ಮಾಡಿದ್ದು ಯಾಕೆ? ನಿರುದ್ಯೋಗ ಭತ್ಯೆಯನ್ನು ಒಂದೇ ವರ್ಷಕ್ಕೆ ಇಳಿಸಿದ್ದು ಯಾಕೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನವರು ಪ್ರತಿಪಕ್ಷವಾಗಿದ್ದಾಗ ಏನು ಮಾಡಿದ್ದಿರೋ ಅದನ್ನೇ ನಾವು ಮಾಡುತ್ತೇವೆ. ಪ್ರಜಾಪ್ರಭುತ್ವ ದಲ್ಲಿ ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ ಅಧಿಕಾರ ಕೊಟ್ಟಿದ್ದಾರೆ. ಗ್ಯಾರೆಂಟಿ ಜಾರಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೊಟ್ಟ ಮಾತು ಜಾರಿಗೆ ತನ್ನಿ ಎಂಬುದು ನಮ್ಮ ನಿಲುವು. ಗ್ಯಾರಂಟಿ ಕೊಡೋ ತನಕ ಬಿಜೆಪಿ ಜನರ ಜೊತೆ ಹೋರಾಟ ಮಾಡುತ್ತದೆ ಎಂದು ತಿಳಿಸಿದರು

Latest Indian news

Popular Stories