ಬೈಂದೂರು: ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗೀತಾ ಶಿವರಾಜಕುಮಾರ್ ಅಭಿಮತ ; ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸರ್ಕಾರದ ಪಾಲುದಾರರು

ಚಿತ್ರ: ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ತ್ರಾಸಿಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಉದ್ಘಾಟಿಸಿದರು.

ಶಿವಮೊಗ್ಗ: ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯುವ ಪ್ರತಿಯೊಬ್ಬ ನಾಗರೀಕರೂ ಕೂಡ ಸರ್ಕಾರದ ಪಾಲುದಾರು ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

1000860807 KUNDAPURA, Election, Udupi

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ತ್ರಾಸಿಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಪೂರೈಸಲು ಮಾಸಿಕ ₹50 ಲಕ್ಷ ಹಣ ಕರ್ಚಾಗುತ್ತಿದೆ. ಇಲ್ಲಿ ವಾರ್ಷಿಕ ₹6 ಕೋಟಿ ಹಣ ವ್ಯಯಿಸಬೇಕು. ಆದ್ದರಿಂದ ದೇಶದಲ್ಲಿ ಇಂತಹ ಯೋಜನೆ ಎಲ್ಲಿಯೂ ಇಲ್ಲ ಎಂದರು.

ರಾಜ್ಯದಲ್ಲಿ ₹58 ಸಾವಿರ ಕೋಟಿ ಹಣದ ಹೊರೆ ಸರ್ಕಾರಕ್ಕೆ ಆಗುತ್ತಿದೆ. ಆದರೂ, ಈ ಬಗ್ಗೆ ಯಾವುದೇ, ಒಳ ಒಪ್ಪಂದಕ್ಕೆ ಸರ್ಕಾರ ಸಿದ್ದವಿಲ್ಲ. ಜನ ಸಾಮಾನ್ಯರ ತೆರಿಗೆ ಹಣವನ್ನು ಪುನಃ ಜನರಿಗೆ ತಲುಪಿಸಲಾಗುತ್ತಿದೆ ಎನ್ನುವ ಸಂತಸ ಸರ್ಕಾರಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ತಮ್ಮ ಬದುಕಿನುದ್ದಕ್ಕೂ ಸಹ ಬಡವರು, ದಲಿತರು, ಶೋಷಿತ ವರ್ಗದವರ ಪರವಾಗಿಯೇ ಚಿಂತಿಸುತ್ತಿದ್ದರು. ಅಂದು, ಬಂಗಾರಪ್ಪ ಅವರು ಜನ ಸಾಮಾನ್ಯರಿಗೆ ನೀಡಿದ ಸೇವೆ, ಇಂದಿಗೂ ಜೀವಂತವಾಗಿವೆ ಎಂದರು.

ಬಂಗಾರಪ್ಪ ಅವರ, ಆರಾಧನ, ಗ್ರಾಮೀಣ ಕೃಪಾಂಕ, ಆಶ್ರಯ ಮತ್ತು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಬಡವರಿಗೆ ಬದುಕಲು ನೆಲೆ ಕಲ್ಪಿಸಿಕೊಟ್ಟಿವೆ ಎಂದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತದಿಂದ ಜನ ಸಾಮಾನ್ಯರು ಬದುಕು ನಡೇಸುವುದೇ ಶೋಚನೀಯ ಸ್ಥಿತಿ ತಲುಪಿದೆ ಎಂದರು.

ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಲತಾಯಿ ಧೋರಣೆ ತೋರಿದ್ದಾರೆ. ಅಧಿಕಾರದ ಗದ್ದಿಗೆ ಏರಿ ೧೫ ವರ್ಷ ಕಳೆದವು.ಆದರೆ, ಕ್ಷೇತ್ರ ಮಾತ್ರ ಕತ್ತಲಲ್ಲಿ ಮುಳುಗಿದೆ ಎಂದು ದೂರಿದರು.

ಪ್ರಮುಖರಾದ ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಅರವಿಂದ ಪೂಜಾರಿ, ಹರೀಶ್ ಕೊಡಪಾಡಿ, ಚಂದ್ರ ಶೇಖರ ಪೂಜಾರಿ, ಮಂಜುಳ ದೇವಾಡಿಗ ಸೇರಿ ಗಣ್ಯರು ಇದ್ದರು.

“ಚಿಕ್ಕ ವಯಸ್ಸಿನಿಂದ ಪತ್ನಿ ಗೀತಾ ಅವರು ಬಂಗಾರಪ್ಪ ಅವರ ರಾಜಕೀಯ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾರೆ. ಬಂಗಾರಪ್ಪ ಅವರು, ಎಲ್ಲಾ ಧರ್ಮ, ಸಮುದಾಯಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅದೇ ಗುಣ ಗೀತಾ ಅವರಿಗೆ ಬಂದಿದೆ. ಜಿಲ್ಲೆಯಲ್ಲಿ ಬಂಗಾರಪ್ಪ ಅವರ ಋಣ ತೀರಿಸಲು ಒಂದು ಅವಕಾಶ ಕಲ್ಪಿಸಿಕೊಡಿ”
– ಶಿವರಾಜಕುಮಾರ್, ನಟ.

ಬೈಂದೂರು: ಗ್ರಾಮೀಣ
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗೀತಾ ಶಿವರಾಜಕುಮಾರ್ ಮನವಿ

ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೂಯ್ಯಲು ಅವಕಾಶ ನೀಡಿ

ಬೈಂದೂರು: ‘ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ‌. ಆದ್ದರಿಂದ, ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ನಾಡ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಡವ, ಶ್ರೀಮಂತ ಎಂಬ ಬೇಧಭಾವ ತೋರದೆ, ಪ್ರತಿಯೊಬ್ಬರಿಗೂ ನಮ್ಮ ಕಾಂಗ್ರೆಸ್ ಪಕ್ಷದ ಜನಪರ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಅದೇ, ರೀತಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಬೈಂದೂರು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಲು ನನಗೆ ಅವಕಾಶ ಕಲ್ಪಿಸಿಕೊಡಿ ಎಂದರು.

ರಾಜ್ಯದಲ್ಲಿ ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೂರಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನರೇಗಾ ಯೋಜನೆಗೆ ಬೇಡಿಕೆ ಹೆಚ್ಚಿದೆ. ಆದರೆ ಕೆಲಸವಿಲ್ಲ. ನಂದಿನಿ ಹಾಲು ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಧ್ವನಿ ಎತ್ತಲು, ನನಗೆ ಮತ ನೀಡಿ ಅವಕಾಶ ಒದಗಿಸಿಕೊಡಿ ಎಂದರು‌.

ಶಿವಮೊಗ್ಗ- ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಂದುಳಿದಿದೆ ಎನ್ನುವ ಅಳಕನ್ನು ತೊಡೆದು ಹಾಕಿ, ಬಂಗಾರಪ್ಪ ಅವರ ಚಿಂತನೆಗಳಿಗೆ ಜೀವ ತುಂಬಬೇಕಿದೆ. ಇದಕ್ಕೆ ಮಾಜಿ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಕೆ. ಗೋಪಾಲ ಪೂಜಾರಿ ಅವರ ನೆರವು ಅಗತ್ಯ. ಕ್ಷೇತ್ರದಲ್ಲಿ ಎಲ್ಲಾ ವರ್ಗಗಳನ್ನೂ ಕ್ರೂಡೀಕರಿಸಿಕೊಂಡು ಚುನಾವಣೆ ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪಕ್ಷ ನಂಬಿಕೊಂಡು ನಾವು ಮೋಸ ಹೋಗಿದ್ದು ಸಾಕು. ಬಿಜೆಪಿ ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಪರಿಸ್ಥಿತಿ, ಜನರ ಬದುಕು, ರಾಜಕೀಯ ಅವನತಿ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ಬೆಂಬಲಿಸಲು ಮುಂದಾಗಬೇಕು ಎಂದರು.

‘ಜನ ಸಾಮಾನ್ಯರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ‌ ಕೇಂದ್ರ ಸರ್ಕಾರದ ಭರವಸೆಗಳು ಹುಸಿಯಾಗಿವೆ. ಜನಸಾಮಾನ್ಯರ ಬದುಕು ಹದಗೆಟ್ಟಿದೆ. ಬೈಂದೂರು ಕ್ಷೇತ್ರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಶೂನ್ಯ. ಇಲ್ಲಿ ಅಭಿವೃದ್ಧಿ ಆಗಿದ್ದರೆ, ಅದು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಎಂದರು.

ಬಿಜೆಪಿ ಪಕ್ಷ ಮೇಲ್ಜಾತಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಇದು ನನ್ನ ಅನುಭವದ ಮಾತು. ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳ ₹11 ಲಕ್ಷ ಕೋಟಿ ಹಣ ಮನ್ನಾ ಮಾಡಿದೆ. ಇದು ಜನ ಸಾಮಾನ್ಯರಿಗೆ ಅರಿವಾಗುತ್ತಿಲ್ಲ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೊದಿ ಅವರ ಸರ್ಕಾರ ಕಾರ್ಪೊರೇಟ್‌ಗಳಿಗೆ ಮಣೆ ಹಾಕಿದೆ. ಅವರ ಆಪ್ತರು, ಸ್ನೇಹಿತರು ಜಗತ್ತಿನ ಅತೀ ಶ್ರೀಮಂತರಾಗಿ‌ ಬೆಳೆಯುತ್ತಿದ್ದಾರೆ. ಅಲ್ಲದೆ, ಅಕ್ರಮ ಸಂಪತ್ತು ಕ್ರೂಢೀಕರಿಸಿಕೊಂಡು ಜಗತ್ತಿನ ಶ್ರೀಮಂತ ಪಕ್ಷವಾಗಿ ಬೆಳೆದು ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ, ಗಲಭೆ ಹೆಚ್ಚಾಗಿದ್ದು, ಪ್ರಜಾತಾಂತ್ರಿಕ ಮೌಲ್ಯಗಳು ಗಾಳಿಗೆ ತೂರಿದೆ ಎಂದರು.

ಬಿಜೆಪಿಯ ಸಂಸದ ಬಿ.ವೈ.ರಾಘವೇಂದ್ರ ಅವರು ಬೈಂದೂರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ತಿಳಿಸಬೇಕಿದೆ. ಚುನಾವಣೆಯಲ್ಲಿ ಗೆದ್ದ ದಿನದಿಂದ ಕ್ಷೇತ್ರಕ್ಕೆ ನೆಂಟರ ರೀತಿ, ರಾಘವೇಂದ್ರ ಬಂದು ಹೋಗಿದ್ದಾರೆಯೇ ವಿನಃ ಅಭಿವೃದ್ಧಿ ಮಾತ್ರ ಶೂನ್ಯ ಎಂದು ದೂರಿದರು.

ನಟ ಶಿವರಾಜಕುಮಾರ್ ಮಾತನಾಡಿ, ಕ್ಷೇತ್ರಕ್ಕೆ ಸ್ಟಾರ್ ನಟ ಬಂದಾಕ್ಷಣ ಬದಲಾವಣೆ ಆಗುವುದಿಲ್ಲ. ಬಡವರ ಸೇವೆ ಮಾಡುವ ನಾಯಕರನ್ನು ಮತದಾರರು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಯಸುತ್ತಾರೆ. ನಾನಿಲ್ಲಿ ನಟನಾಗಿ ಬಂದಿಲ್ಲ. ಬದಲಾಗಿ, ಗೀತಾ ಅವರ ಗಂಡನಾಗಿ ಬಂದಿದ್ದೇನೆ. ನಿಮ್ಮ ನಂಬಿಕೆಗೆ ಅವರು ಮೋಸ ಮಾಡುವುದಿಲ್ಲ. ಒಂದು ಬಾರಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.

ಬೈಂದೂರು ಕ್ಷೇತ್ರದ ಆಲೂರು, ನಾವುಂದ, ಕಾಲ್ತೋಡು, ಕಂಬದ ಕೋಣೆ, ತ್ರಾಸಿ ಗ್ರಾಮಾಂತರ ಪ್ರದೇಶಗಳಲ್ಲಿ ಸಭೆ ನಡೆಸಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ತಾಲ್ಲೂಕಿನ ಮರವಂತೆ ಮಹಾರಾಜ ಸ್ವಾಮಿ ವರಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್,ಬೈಂದೂರು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಜಿ.ಎ.ಭಾವ, ನಾಡದ ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಾ ದೇವಾಡಿಗ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಿವಿಂದ ಪೂಜಾರಿ, ರಾಜೇಶ್, ಕೆಪಿಸಿಸಿ ಸದಸ್ಯ ಪ್ರಕಾಶ್ ಇದ್ದರು.

Latest Indian news

Popular Stories