
ಮಲ್ಪೆ ಪ್ರಕರಣ: ಪ್ರಚೋದನಕಾರಿ ವಾಯ್ಸ್ ನೋಟ್ – ಇನ್ನೊಂದು ಪ್ರಕರಣ
ಪೊಲೀಸ್ ಪ್ರಕಟಣೆ
ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ಹೇಗೆ ನಿಭಾಯಿಸಬೇಕು, ಹಾಗೂ ಎಲ್ಲಾ ಸಮಾಜಗಳನ್ನು ಒಳಗೊಂಡು ಮೀನುಗಾರರಿಗೆ ಬಂದರಿನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಲ್ಪೆ ಮೀನುಗಾರರ ಸಂಘ (ರಿ) ಹಾಗೂ ಇನ್ನಿತರರ ಪ್ರಮುಖ ಮೀನುಗಾರಿಕಾ ಸಂಘಗಳು ದಿನಾಂಕ 22.03.2025ರಂದು ಪ್ರತಿಭಟನಾ ಸಭೆಯನ್ನು ಮಲ್ಪೆಯ ಬಂದರು ಪ್ರದೇಶದಲ್ಲಿ ಹಮ್ಮಿಕೊಂಡಿರುತ್ತಾರೆ.
ಈ ಸಭೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುತ್ತಾರೆ. ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಮಂಜು ಕೊಳ ರವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿರುತ್ತಾರೆ, ಈ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಗಲಭೆ ಮಾಡಿದ ರೀತಿಯಲ್ಲಿ ಇನ್ನೊಮ್ಮೆ ಮಾಡಬೇಕಾಗುತ್ತದೆ ಎಂದು ಉಲ್ಲೇಖಿಸಿ ಭಾಷಣ ಮಾಡಿರುತ್ತಾರೆ. ಈ ಬಗ್ಗೆ ಈಗಾಗಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ 34/2025 ಹಾಗು 38/2025 ಕಲಂ 57 ಜೊತೆಗೆ , 191(1) , 192 , BNS ರೀತಿ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುತ್ತದೆ.
ಆದಾಗ್ಯೂ ಈ ದಿವಸ ಯಾರೋ ಅಪರಿಚಿತ ವ್ಯಕ್ತಿಯು ವಾಟ್ಸಾಪ್ ನಲ್ಲಿ ವಾಯ್ಸ್ ನೋಟ್ ನ್ನು ತುಳು ಭಾಷೆಯಲ್ಲಿ ಬಿಟ್ಟಿದ್ದು “ಸೋಮವಾರ ಹೋಯ್ತು ಮಂಗಳವಾರ ಬಂತು ಆದರೂ ಇದುವರೆಗೂ ನಮ್ಮ ಹೆಂಗಸರು ಮೀನುಗಾರ ಹೆಂಗಸರು ಬರಲಿಲ್ಲ. ಬಿಡುಗಡೆ ಅಗಲಿಲ್ಲ.ಅದಕ್ಕೆ ನಮ್ಮ ಮೀನುಗಾರ ಸಂಘದವರು ಎಲ್ಲರು ಒಟ್ಟಾಗಿ ಗಂಗೊಳ್ಳಿಯಲ್ಲಿ ಅವರನ್ನ ಏನು ಮಾಡಿದ್ದಾರೆ ಹಾಗೆಯೇ ಎಲ್ಲರೂ ಒಟ್ಟಾಗಿ ಒಂದೊಂದು ಮನೆಯಲ್ಲಿ ಎಷ್ಟು ಜನ ಇದ್ದಾರೆ ಅವರೆಲ್ಲರೂ ರೋಡಿಗೆ ಇಳಿದು ಸ್ಟ್ರೈಕ್ ಮಾಡಬೇಕು ಹಾಗೆ ಮಾಡಿದರೆ ಮಾತ್ರ SPಗೆ ಹಾಗೆ ಅವರ ಮೇಲೆ ಇದ್ದವರಿಗೂ ನಮ್ಮ ಶಕ್ತಿ ಎಷ್ಟು ಇದೆ ಎಂದು ಗೊತ್ತಾಗುತ್ತೆ.” ಎಂಬುದಾಗಿ ಈ ಹಿಂದೆ 2014ನೇ ಸಾಲಿನಲ್ಲಿ ಅಪರಾಧ ಕ್ರಮಾಂಕ 196/2014 ಪ್ರಕರಣದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಬಗ್ಗೆ ಈ ಅಪರಿಚಿತ ವ್ಯಕ್ತಿಯು ಆಡಿಯೋ ಕ್ಲಿಪ್ ನಲ್ಲಿ ತಿಳಿಸಿ ಪುನಃ ಸಾರ್ವಜನಿಕರಿಂದ ಇಂಥಹ ಅಪರಾಧ ಮಾಡಿಸಲು ದುಷ್ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ , ಇಷ್ಟಪೂರ್ವಕವಾಗಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದೂ ಪ್ರಚೋದಿಸುತ್ತಾ ಉದ್ರೇಕಕಾರಿಯಾಗಿ, ಸಾರ್ವಜನಿಕ ಕೇಡಿಗೆ ಕಾರಣವಾಗುವ ಮಾಹಿತಿಯನ್ನು ಆಡಿಯೋ ಕ್ಲಿಪ್ ಮಾಡಿ ವಿದ್ಯುನ್ಮಾನ ಸಾಧನಗಳ ಮೂಲಕ ವಾಟ್ಸಾಪ್ ನಲ್ಲಿ ಬಿತ್ತರಿಸಿರುತ್ತಾನೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025 ಕಲಂ. 57 ಜೊತೆಗೆ , 189 , 192 ,353(1) (b) BNS ರಂತೆ ಸುಮೊಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಿಖೆ ಮುಂದುವರಿದಿರುತ್ತದೆ.




