ಕರಾವಳಿಯಲ್ಲಿ ಕೆಲವೇ ಕೆಲವು ದಿನಗಳಲ್ಲಿ “ಮುಂಗಾರು” ಎಂಟ್ರಿ!

ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನೆ ಪ್ರಕಾರ ಮುಂದಿನ ಮೂರ್‍ನಾಲ್ಕು ದಿನಗಳ ಒಳಗಾಗಿ ಮುಂಗಾರು ಕೇರಳ ಪ್ರವೇಶಿಸಲಿದೆ.

ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.ಕರಾವಳಿ ಭಾಗದಲ್ಲಿ ಮೇ 29 ಮತ್ತು 30ರಂದು “ಎಲ್ಲೋ ಅಲರ್ಟ್‌’ ಘೋಷಿಸಲಾಗಿದ್ದು, ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವೂ ಕಡಿಮೆಯಾಗಿದ್ದು, ಮಂಗಳವಾರ 31.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.4 ಡಿ.ಸೆ. ಕಡಿಮೆ ಇತ್ತು. 26.7 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು.

ದ.ಕ. ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಹಲವೆಡೆ ಸಣ್ಣದಾಗಿ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಮೋಡ, ಬಿಸಿಲು ವಾತಾವರಣ ನಡುವೆ ಕೆಲಕಾಲ ಹನಿಹನಿ ಮಳೆಯಾಗಿದೆ. ಬಿಸಿಲು-ಮೋಡದ ನಡುವೆಯೂ ಸೆಕೆಯ ಪ್ರಮಾಣ ಹೆಚ್ಚಿತ್ತು.

ಕರಾವಳಿಯಲ್ಲಿ 2018ರ ಮೇ 29ರಂದು ಭಾರೀ ಮಳೆ ಸುರಿದಿತ್ತು. ದಿನವಿಡೀ ಸುರಿದ ಬಿರುಸಿನ ಮಳೆಗೆ ಮಂಗಳೂರು ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಬ್ಬರದ ಮಳೆ ನಗರದ ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಜಿಲ್ಲೆಯಲ್ಲಿ ಕೇವಲ ಆರು ಗಂಟೆಯಲ್ಲಿ 36.8 ಸೆಂ.ಮೀ. ಮಳೆಯಾಗಿ ಸುಮಾರು 560 ಮನೆಗೆ ಹಾನಿ ಉಂಟಾಗಿತ್ತು. 20.47 ಕೋಟಿ ರೂ. ನಷ್ಟ ಉಂಟಾಗಿತ್ತು.

ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್‌ (ತುರ್ತು ನಾಗರಿಕ ಸ್ಪಂದನಾ ತಂಡ) ತಂಡ ವಾರದೊಳಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ. ವಿಜಯವಾಡದ 10ನೇ ಬೆಟಾಲಿಯನ್‌ನಿಂದ ಈ ತಂಡ ಆಗಮಿಸಲಿದೆ. ಸದ್ಯ 25 ಮಂದಿಯ ಎಸ್‌ಡಿಆರ್‌ಎಫ್‌ ತಂಡ ಸದ್ಯ ಮಂಗಳೂರಿನಲ್ಲಿ ಸನ್ನದ್ಧವಾಗಿದೆ.

Latest Indian news

Popular Stories