ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರು ಮತ್ತು ಚಾಲಕರು ಎದುರಿಸುತ್ತಿರುವ ಸಮಸ್ಯೆ ಹಿಂದಿನ ಬಿಜೆಪಿ ಆಡಳಿತದ ಪಾಪದ ಕೂಸು – ರಮೇಶ್ ಕಾಂಚನ್

ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರು ಮತ್ತು ಚಾಲಕರು ಎದುರಿಸುತ್ತಿರುವ ಸಮಸ್ಯೆ ಹಿಂದಿನ ಬಿಜೆಪಿ ಆಡಳಿತ ಪಾಪದ ಕೂಸು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಹೇಳಿದ್ದಾರೆ.

ಪರವಾನಿಗೆ ರಹಿತ ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಜಿಲ್ಲಾದ್ಯಂತ ಇಂದಿನಿಂದ ನೂರಾರು ಲಾರಿ ಹಾಗೂ ಟೆಂಪೊಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನಿದಿಷ್ಟಾವಧಿ ಮುಷ್ಕರ ಆರಂಭಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟ ಹಿಂದಿನ ಬಿಜೆಪಿ ಅಡಳಿತದ ಬೆಜವಾಬ್ದಾರಿ ವರ್ತನೆಯ ಫಲವಾಗಿ ಇಂದು ಜಿಲ್ಲೆಯ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿ ತಂದೊಡ್ಡಿದ್ದಾರೆ.

ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೇ ಹೇಳಿಕೊಂಡಿರುವಂತೆ ಜಿಲ್ಲೆಯಲ್ಲಿ ಕೇವಲ 30% ಮಾತ್ರ ಪರವಾನಿಗೆ ಸಹಿತ ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳಿದ್ದರೆ ಉಳಿದ 70% ಸಂಪೂರ್ಣ ಪರವಾನಿಗೆ ರಹಿತವಾಗಿವೆ. ಇದಕ್ಕೆ ಹಿಂದಿನ ಬಿಜೆಪಿ ಆಡಳಿತ ಯಾಕೆ ಅವಕಾಶ ಮಾಡಿಕೊಟ್ಟಿದೆ ? ಹಿಂದೆ ಕೂಡ ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಶಾಸಕರೇ ಇದ್ದು ರಾಜ್ಯ ಸರಕಾರ ಕೂಡ ಬಿಜೆಪಿಯ ಆಡಳಿತದಲ್ಲಿರುವುದರಿಂದ ಈ ಸಮಸ್ಯೆಗೆ ಹಿಂದಿನ ಬಿಜೆಪಿ ಸರಕಾರ ನೇರ ಹೊಣೆಯಾಗಿದೆ. ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಗ್ರಿ ಸಾಗಾಟ ವಾಹನಗಳಿಗೆ ಪರವಾನಿಗೆ ಪಡೆಯುವಂತೆ ಅಂದು ಸೂಚನೆ ನೀಡದೆ ಈಗ ಇತ್ತೀಚೆಗೆ ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಬಿಜೆಪಿಗೆ ಶೋಭೆ ತರುವುದಿಲ್ಲ.

ಜಿಲ್ಲೆಯಲ್ಲಿ ಮರಳು ಮಾತ್ರವಲ್ಲದೆ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು ಪರವಾನಿಗೆ ಹೊಂದಿರುವ ವಾಹನ ಚಾಲಕರು, ಮಾಲಕರಿಗೆ ಯಾವುದೇ ರೀತಿಯ ಸಮಸ್ಯೆ ತೊಂದರೆ ನೀಡುತ್ತಿಲ್ಲ ಬದಲಾಗಿ ಕಾನೂನು ಪ್ರಕಾರ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳುಸಾಗಾಟ, ಸೇರಿದಂತೆ ಇತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರೂ ಕೂಡ ಬೆಂಬಲಿಸಬೇಕಾಗಿದ್ದು ಈ ಮೂಲಕ ದಕ್ಷ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ.

ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಪ್ರಸ್ತುತ ಇರುವ ಸಮಸ್ಯೆಯನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಕೂತು ಮಾತನಾಡಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದು ಈ ನಡುವೆ ಜನರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ಬಿಜೆಪಿಯ ಶಾಸಕರು ನೀಡುವುದು ಸರಿಯಲ್ಲ ಬದಲಾಗಿ ಅಕ್ರಮ ಸಾಗಾಟವನ್ನು ವಿರೋಧಿಸುವ ಕೆಲಸ ಮಾಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories