ಕಾಂಗ್ರೆಸ್ ಒಳಗೆ ಆಪರೇಷನ್ ಸ್ಪರ್ಧೆ ಮಾಡುತ್ತಿದೆ | ಯಾರು ಹೆಚ್ಚು ಜನರನ್ನು ತಮ್ಮ ಪಕ್ಷಕ್ಕೆ ಕರೆ ತರುವುದು ಎಂಬ ಪೈಪೋಟಿ ಇದೆ – ಶೋಭಾ ಕರಂದ್ಲಾಜೆ

ಉಡುಪಿ: ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆತರುವ ಯಾವುದೇ ಯೋಚನೆ ಆಗಿಲ್ಲ. ರಾಜ್ಯ ಸರಕಾರ ಈಗಷ್ಟೇ ನೂರು ದಿನ ಪೂರೈಸಿದೆ. ಸರಕಾರದಲ್ಲಿ ಅಸಮಾಧಾನ ಇದೆ. ಬಿಜೆಪಿ ಎಂದೂ ಶಾಸಕರನ್ನು ಸೆಳೆಯುವ ಯೋಚನೆ ಮಾಡಿಲ್ಲ. ಆದರೆ ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ನೊಳಗೆ ಆಪರೇಷನ್ ಸ್ಪರ್ಧೆ ಮಾಡುತ್ತಿದೆ. ಯಾರು ಹೆಚ್ಚು ಜನರನ್ನು ತಮ್ಮ ಪಕ್ಷಕ್ಕೆ ಕರೆ ತರುವುದು ಎಂಬ ಪೈಪೋಟಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಆರಂಭವಾಗಿದೆ ಎಂದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇವತ್ತು ಕರ್ನಾಟಕದಲ್ಲಿ ಸಂಕಷ್ಟದಲ್ಲಿ ಇರಬಹುದು. ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ಎಲ್ಲರೂ ಬಂದಿದ್ದೀರಿ. ನಿಮಗೆ ಒಳ್ಳೆಯ ಅಧಿಕಾರ ಕೊಟ್ಟು ಒಳ್ಳೆಯ ಮಂತ್ರಿ ಗಿರಿ ಕೊಟ್ಟಿದ್ದೇವೆ. ಇಲ್ಲಿ ಬಂದರು ಅಧಿಕಾರ ಇಲ್ಲದಾಗ ಹೋದ್ರು ಅನ್ನೋ ಕೆಟ್ಟ ಹೆಸರು ಬೇಡ. ಇದೇ ಕಾರಣಕ್ಕೆ ಯಾರು ಕೂಡ ಬಿಜೆಪಿ ಬಿಡಲ್ಲ ಬಿಡಲು ಬಾರದು ಎಂದು ಪ್ರಾರ್ಥನೆ ಮಾಡುತ್ತೇನೆ. ಅಧಿಕಾರದಲ್ಲಿದ್ದಾಗ ಬಂದವರು ಅಧಿಕಾರ ಇಲ್ಲದಿದ್ದಾಗ ಹೋದರೆ ಸರಿ ಅನಿಸುತ್ತದೆಯೇ ಎಂದು ಪ್ರಶ್ನಿಸಿದರು.

ಭಾರತದಲ್ಲಿ ವರ್ಷದ 3-4 ತಿಂಗಳು ಚುನಾವಣೆ ನಡೆಯುತ್ತದೆ. ಇದರಿಂದ ಟೆಂಡರ್ ಕರೆಯಲು ಆಗದೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ. ಅದಕ್ಕಾಗಿ ಒಂದು ದೇಶ ಒಂದು ಚುನಾವಣೆ ಏಕಕಾಲದಲ್ಲಿ ಎಲ್ಲ ಚುನಾವಣೆಗಳು ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಕೇರಳದಲ್ಲಿ ಜಿಪಂ, ಗ್ರಾಪಂ, ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಇದೇ ರೀತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬಹುದು ಎಂದು ಅವರು ತಿಳಿಸಿದರು.

ಚಿಹ್ನೆಯಲ್ಲಿ ನಡೆಯುವ ಚುನಾವಣೆ ಒಟ್ಟಿಗೆ ನಡೆಸಬಹುದು. ಇದರಿಂದ ಸಮಯ, ಶ್ರಮ, ಹಣ ಉಳಿಸಬಹುದು. ಪ್ರಚಾರದ ಖರ್ಚು ಕೂಡ ಉಳಿಯುತ್ತದೆ. ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ. ಈ ವಿಚಾರದಲ್ಲಿ ವಿಪಕ್ಷ ಯಾಕೆ ಹೆದರಬೇಕು ಮತ್ತು ಯಾಕೆ ವಿರೋಧ ಮಾಡಬೇಕು. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಾರೆ ಎಂದರು.

ಅವಧಿಗೂ ಮುನ್ನ ಅದಿವೇಶನ ವಿರೋಧ ಪಕ್ಷಗಳ ವಿರೋಧ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಲಕಾಲಕ್ಕೆ ಸರಕಾರ ತೀರ್ಮಾನ ಮಾಡಿ ಅಧಿವೇಶನ ಕರೆಯಬಹುದಾಗಿದೆ. ಪ್ರಮುಖ ವಿಚಾರದ ಕುರಿತು ಚರ್ಚೆ ಮಾಡಲು ಸರಕಾರ ಅಥವಾ ಮಂತ್ರಿಮಂಡಲ ಈ ರೀತಿ ಅವಧಿಗೂ ಮುನ್ನ ಅದಿವೇಶನ ಕರೆಯುವುದು ಸಾಮಾನ್ಯವಾಗಿದೆ. ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಸದನ ನಡೆಯದಂತೆ ಮಾಡಿದ್ದವು. ಅದರಲ್ಲಿ ಮಹತ್ವದ ವಿಚಾರಗಳು ಚರ್ಚೆಗೆ ಬರಲಿಲ್ಲ. ಅಧಿವೇಶನದಲ್ಲಿ ಭಾಗವಹಿಸದೆ ಜನರ ನಮ್ಮನ್ನು ಆಯ್ಕೆ ಮಾಡಿದ ಉದ್ದೇಶವನ್ನು ಹಾಳು ಮಾಡಿದರು. ಸೆ.17ರಂದು ನಡೆಯುವ ಅಧಿವೇಶನ ಖಂಡಿತವಾಗಿಯೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡ ಲಾಗುವುದು ಎಂದು ತಿಳಿಸಿದರು.

ನಮಗೆ ಬಹುಮತ ಇದ್ದರೂ ಏಕಪಕ್ಷೀಯ ನಿರ್ಧಾರ ಮಾಡಿಲ್ಲ. ರಾಜ್ಯ, ದೇಶ ಎಲ್ಲಿಯೂ ನಾವು ಏಕ ಪಕ್ಷವಾಗಿ ನಡೆದುಕೊಂಡಿಲ್ಲ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವುದು ನಮ್ಮ ತೀರ್ಮಾನ. ಎಲ್ಲಾ ಪಕ್ಷಗಳು ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು. ತಮ್ಮ ಕ್ಷೇತ್ರದ ಜನರ ಅಭಿಪ್ರಾಯವನ್ನು ಮಂಡಿಸಬೇಕು ಎಂದು ಅವರು ಹೇಳಿದರು.

ಗ್ಯಾರೆಂಟಿ ಯೋಜನೆಗಳಿಂದ ಖಾಸಗಿ ವಲಯಕ್ಕೆ ಹೊಡೆತದ ಬಗ್ಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನ ಉಚಿತ ಯೋಜನೆಗಳಿಂದ ಹಲವಾರು ಅವಾಂತರವಾಗಿದೆ. ಎಲ್ಲವನ್ನು ಉಚಿತವಾಗಿ ಕೊಟ್ಟರೆ ಜನರಿಗೆ ಸಂತೋಷ ಆಗುತ್ತದೆ. ಕಳೆದ ತಿಂಗಳು ಈ ರಾಜ್ಯದ ನ್ಯಾಯಾಧೀಶರಿಗೆ, ಶಿಕ್ಷಕರಿಗೆ ಮತ್ತೆಲ್ಲರಿಗೂ ಒಂದು ವಾರ ತಡವಾಗಿ ಸಂಬಳವಾಗಿದೆ. ಹಲವಾರು ಯೋಜನೆಗಳಿಗೆ ಸರಿಯಾಗಿ ಹಣ ಸಿಗುತ್ತಿಲ್ಲ. ಸಾಮಾಜಿಕ ಭದ್ರತಾ ಯೋಜನೆಗೆ ಹಣ ಇಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರದ ಕೊಡುಗೆ ನಿಲ್ಲಿಸಿದೆ ಎಂದು ಅವರು ದೂರಿದರು.

ಸರಕಾರ ಇವತ್ತು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಶೇ.50ರಷ್ಟು ರೂಟ್ ಬಸ್ಗಳನ್ನು ಕಡಿತ ಮಾಡಲಾಗಿದೆ. ಸಾರಿಗೆ ಇಲಾಖೆಯ ಸಂಸ್ಥೆಗಳು ನಷ್ಟಕ್ಕೆ ಹೋಗುತ್ತಿವೆ. ಎಲ್ಲದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಚೀಪ್ ರಾಜಕಾರಣದಿಂದ ಅವಾಂತರ ಮಾಡಿದ್ದಾರೆ. ಫ್ರೀ ಅಂತ ಇನ್ನೊಬ್ಬರಿಂದ ಕಿತ್ತುಕೊಳ್ಳುತ್ತಿದ್ದಾರೆ ಮತ್ತು ದರೋಡೆ ಮಾಡುತ್ತಿದ್ದಾರೆ. ಖಾಸಗಿಯವನು ಸಾಲ ಹೇಗೆ ಕಟ್ಟಬೇಕು. ಜೀವನ ಹೇಗೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ತಮಿಳುನಾಡು ಸರಕಾರದ ಮನವೊಲಿಸಬೇಕು. ಕಳೆದ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಈ ಬಾರಿ ರಾಜ್ಯ ಸರಕಾರ ತಪ್ಪುಮಾಡುತ್ತಿದೆ. ಮುಖ್ಯಮಂತ್ರಿಗಳು ಕೆಆರ್ಎಸ್ ಡ್ಯಾಮ್ನ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ರಾಜ್ಯದ ಯಾವುದೇ ಡ್ಯಾಮ್ಗಳು ತುಂಬಿಲ್ಲ. ಕೆಆರ್ಎಸ್ ಡ್ಯಾಂ ಕರ್ನಾಟಕದ ದಕ್ಷಿಣ ಭಾಗಕ್ಕೆ ಮತ್ತು ಕಾವೇರಿ ನದಿ ಬೆಂಗಳೂರು, ಕೋಲಾರ, ಮೈಸೂರಿಗೆ, ಮಂಡ್ಯ, ತುಮಕೂರಿಗೆ ನೀರು ಕೊಡುತ್ತದೆ. ನಮ್ಮ ಡ್ಯಾಮ್ನ ನೀರು ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಎಲ್ಲಿಗೆ ಹೋಗುವುದು. ಇಂಡಿಯಾ ಟೀಮ್ನ್ನು ಖುಷಿ ಪಡಿಸಲು ನೀರು ಬಿಡುತ್ತಿದ್ದಾರೆ. ಕರ್ನಾಟಕ ತಮಿಳುನಾಡು ಭಾರತ-ಪಾಕಿಸ್ತಾನ ಅಲ್ಲ. ಅವರು ನಮ್ಮ ನೆರೆಕೆರೆ ಯವರು. ಹೆಚ್ಚುವರಿ ನೀರಿದ್ದಾಗ ಬಿಡುತ್ತೇವೆ ಎಂದರು

Latest Indian news

Popular Stories